‘We are protecting Indians’: Houthi accuses Saudi Arabia of attacking ship carrying 14 Indians near Yemen! What did India say? – ಮಧ್ಯಪ್ರಾಚ್ಯದಲ್ಲಿ ಸೌದಿ ಅರೇಬಿಯಾ ಹಾಗೂ ಹೌತಿ ಬಂಡುಕೋರರ ಸಂಘರ್ಷ ಮುಂದುವರಿದಿರುವ ನಡುವೆಯೇ, ಯೆಮೆನ್ ಕರಾವಳಿಯ ಜುಕಾರ್ ದ್ವೀಪದ ಬಳಿ 14 ಭಾರತೀಯ ಪ್ರಜೆಗಳಿದ್ದ ವಿಹಾರ ನೌಕೆಯ ಮೇಲೆ ಸೌದಿ ಅರೇಬಿಯಾ ದಾಳಿ ನಡೆಸಿದೆ ಎಂದು ಹೌತಿ ಪಡೆ ಗಂಭೀರ ಆರೋಪ ಮಾಡಿದೆ. ಸೌದಿಗಳು ಭಾರತೀಯರ ನೌಕೆ ಮೇಲೆ ದಾಳಿ ಮಾಡಿದ್ರೆ ನಾವೇ ಅವರನ್ನು ರಕ್ಷಿಸುತ್ತಿದ್ದೇವೆ ಎಂದು ಹೌತಿ ಹೇಳಿಕೊಂಡಿದ್ದು ಜಾಗತಿಕ ಸಮುದಾಯ ಕೂಡಲೇ ಸೌದಿಯ ಈ ಅಟ್ಟಹಾಸಕ್ಕೆ ಬ್ರೇಕ್ ಹಾಕಿ ಎಂದು ಒತ್ತಾಯಿಸಿದೆ. ಸದ್ಯ ಈ ಆರೋಪದ ಬೆನ್ನಲ್ಲೇ ಯೆಮೆನ್ನಲ್ಲಿರುವ ಭಾರತೀಯರ ರಾಯಭಾರ ಕಚೇರಿ ಅಲರ್ಟ್ ಆಗಿದ್ದು, ಇದರ ಸತ್ಯಾಸತ್ಯತೆಯ ಪರಿಶೀಲನೆ ನಡೆಸಲು ತನಿಖೆಗೆ ಮುಂದಾಗಿದೆ.
- ಕೆಂಪು ಸಮುದ್ರದಲ್ಲಿ ಯೆಮನ್ ಬಳಿ 14 ಭಾರತೀಯರಿದ್ದ ನೌಕೆ ಮೇಲೆ ಸೌದಿ ಅರೇಬಿಯಾ ದಾಳಿ ನಡೆಸಿದೆ ಎಂದು ಹೌತಿ ಪಡೆ ಗಂಭೀರ ಆರೋಪ
- ನಾವೇ ದಾಳಿಗೊಳಗಾದ ಭಾರತೀಯರನ್ನ ರಕ್ಷಿಸುತ್ತಿದ್ದೇವೆ, ಸೌದಿಯ ಈ ಕ್ರಮ ತಡೆಯಿರಿ ಎಂದು ಅಂತಾರಾಷ್ಟ್ರೀಯ ಸಮುದಾಯಕ್ಕೆ ಹೌತಿ ಒತ್ತಾಯ
- ಭಾರತೀಯ ಹಡಗಿನ ಮೇಲೆ ಸೌದಿ ದಾಳಿ ಎಂಬ ಹೌತಿ ಆರೋಪದ ಕುರಿತು ತನಿಖೆಗೆ ಮುಂದಾದ ಯೆಮೆನ್ನಲ್ಲಿನ ಭಾರತೀಯ ರಾಯಭಾರ ಕಚೇರಿ ಹೇಳಿದ್ದೇನು?
![]()
ಸನಾ: ಮಧ್ಯಪ್ರಾಚ್ಯದಲ್ಲಿ ಸೌದಿ ಅರೇಬಿಯಾ ಹಾಗೂ ಹೌತಿ ನಡುವಿನ ಸಂಘರ್ಷ ಉಲ್ಬಣಗೊಳ್ಳುತ್ತಿದ್ದು, ಇದರ ಪರಿಣಾಮವನ್ನು ಈ ಪ್ರದೇಶದಲ್ಲಿನ ಭಾರತೀಯರು ಅನುಭವಿಸಬೇಕಾಗುತ್ತಿದೆ. ಸೌದಿಯ ಏರ್ಪೋರ್ಟ್ಗಳ ಮೇಲಿನ ಹೌತಿ ಬಂಡುಕೋರರ ಕ್ಷಿಪಣಿ ದಾಳಿಗೆ ಒಂದೆಡೆ ಭಾರತೀಯರು ಬಲಿಯಾಗುತ್ತಿದ್ದರೆ, ಮತ್ತೊಂದೆಡೆ ಕೆಂಪು ಸಮುದ್ರದಲ್ಲಿ ಭಾರತೀಯರು ತುಂಬಿದ್ದ ನೌಕೆಯ ಮೇಲೆ ಸೌದಿ ಅರೇಬಿಯಾ ದಾಳಿ ನಡೆಸಿದೆ ಎಂದು ಹೌತಿ ಪಡೆಗಳು ಗಂಭೀರ ಆರೋಪ ಮಾಡಿದೆ.
ಯೆಮೆನ್ ಕರಾವಳಿಯಲ್ಲಿ ಭಾರತೀಯರಿದ್ದ ಹಡಗಿನ ಮೇಲೆ ಸೌದಿ ದಾಳಿ ಎಂದು ಹೌತಿ ಆರೋಪ
ಸೌದಿಯಲ್ಲಿನ ಹೌತಿ ದಾಳಿಗಳಿಗೆ ಜಾಗತಿಕವಾಗಿ ಖಂಡನೆ ವ್ಯಕ್ತವಾಗುತ್ತಿರುವ ನಡುವೆ ಇದೀಗ ಯೆಮೆನ್ ಬಳಿಯ ದಕ್ಷಿಣ ಕೆಂಪು ಸಮುದ್ರದಲ್ಲಿ ಜುಕಾರ್ ದ್ವೀಪದ ಬಳಿ 14 ಭಾರತೀಯ ಪ್ರಜೆಗಳನ್ನು ಹೊತ್ತೊಯ್ಯುತ್ತಿದ್ದ ವಿಹಾರ ನೌಕೆಯನ್ನು ಸೌದಿ ಅರೇಬಿಯಾ ಗುರಿಯಾಗಿಸಿಕೊಂಡು ದಾಳಿ ನಡೆಸಿದ್ದು, ಈ ಹಡಗಿನಲ್ಲಿರುವವರನ್ನು ರಕ್ಷಿಸಲು ತಮ್ಮ ಪಡೆಗಳು ಪ್ರಯತ್ನ ನಡೆಸುತ್ತಿವೆ ಎಂದು ಹೇಳಿಕೊಂಡಿದೆ. ಅಲ್ಲದೆ, ಈ ಘಟನೆಯ ಕುರಿತು ಇನ್ನೂ ಹೆಚ್ಚಿನ ವಿವರಗಳನ್ನು ಮುಂದೆ ನೀಡಲಾಗುವುದು ಎಂದು ಹೇಳುವ ಮೂಲಕ ತಾವು ಸೌದಿ ದಾಳಿಯಿಂದ ಭಾರತೀಯರನ್ನು ರಕ್ಷಿಸುತ್ತಿದ್ದೇವೆ ಎಂದು ಪ್ರತಿಪಾದಿಸಿದೆ.
ಈ ಕುರಿತು ತಮ್ಮ ಅಧಿಕೃತ X ಖಾತೆಯ ಮೂಲಕ ಹೌತಿ ಪಡೆಗಳ ಮಿಲಿಟರಿ ವಕ್ತಾರ ಯಾಹ್ಯಾ ಸಾರಿ ಹೇಳಿಕೆ ಬಿಡುಗಡೆ ಮಾಡಿದ್ದಾರೆ. ಇದರಲ್ಲಿ “ಪ್ರಾಥಮಿಕ ಮಾಹಿತಿಯ ಪ್ರಕಾರ, ಸೌದಿ ಶತ್ರುಗಳು ಜುಕಾರ್ ದ್ವೀಪದ ಬಳಿ 14 ಭಾರತೀಯ ಪ್ರಜೆಗಳು ಇರುವ ಭಾರತೀಯ ವಿಹಾರ ನೌಕೆಯನ್ನು ಗುರಿಯಾಗಿಸಿಕೊಂಡಿದ್ದಾರೆ, ಯೆಮೆನ್ ಸಶಸ್ತ್ರ ಪಡೆಗಳು(ಹೌತಿ) ಈ ಹಡಗಿನಲ್ಲಿರುವವರನ್ನು ರಕ್ಷಿಸುತ್ತಿದ್ದು, ಹೆಚ್ಚಿನ ವಿವರಗಳನ್ನು ನಂತರ ಒದಗಿಸಲಾಗುವುದು. ಸೌದಿ ಶತ್ರುಗಳ ಈ ಅಜಾಗರೂಕ ಕೃತ್ಯವು ಕೆಂಪು ಸಮುದ್ರದಲ್ಲಿ ಅಂತಾರಾಷ್ಟ್ರೀಯ ನೌಕಾಯಾನಕ್ಕೆ ಬೆದರಿಕೆ ಹಾಕುತ್ತದೆ. ಈ ಹಿನ್ನಲೆಯಲ್ಲಿ ಅಂತಾರಾಷ್ಟ್ರೀಯ ಸಮುದಾಯವು ಸೌದಿ ಶತ್ರುಗಳನ್ನು ಈ ಅಜಾಗರೂಕ ಕ್ರಮಗಳಿಂದ ತಡೆಯಬೇಕು” ಎಂದು ತಿಳಿಸಿದ್ದಾರೆ.
ಆದಾಗ್ಯೂ, ಈ ದಾಳಿಯ ಕುರಿತು ಸೌದಿ ಅರೇಬಿಯಾದಿಂದ ಯಾವುದೇ ಅಧಿಕೃತ ಪ್ರತಿಕ್ರಿಯೆ ಸಿಕ್ಕಿಲ್ಲ.
ಹೌತಿ ಆರೋಪದ ಬೆನ್ನಲ್ಲೇ ಭಾರತದಿಂದ ತನಿಖೆ ಶುರು
ಇತ್ತ, ಹೌತಿ ಪಡೆಗಳ ಆರೋಪದ ಬೆನ್ನಲ್ಲೇ, ಈ ಕುರಿತು ಯೆಮನ್ನಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಪ್ರತಿಕ್ರಿಯೆ ನೀಡಿದ್ದು, ಈ ವರದಿಯ ಕುರಿತು ಪರಿಶೀಲನೆ ನಡೆಸುತ್ತಿದ್ದು, 14 ಭಾರತೀಯ ಪ್ರಜೆಗಳ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಸಾಧ್ಯವಿರುವ ಎಲ್ಲ ಸಹಾಯವನ್ನು ನೀಡುವುದಾಗಿ ತಿಳಿಸಿದೆ.
ಈ ಕುರಿತು ಯೆಮನ್ನಲ್ಲಿರುವ ಭಾರತೀಯ ರಾಯಭಾರ ಕಚೇರಿ ತಮ್ಮ ಅಧಿಕೃತ X ಖಾತೆಯ ಮೂಲಕ ಪ್ರಕಟಣೆ ಹೊರಡಿಸಿದ್ದು, “ಯೆಮೆನ್ ಕರಾವಳಿಯಲ್ಲಿ 14 ಭಾರತೀಯ ಪ್ರಜೆಗಳು ದೋಣಿಯಲ್ಲಿ ಸಿಲುಕಿರುವ ಘಟನೆಯ ವರದಿಗಳನ್ನು ನಾವು ನೋಡಿದ್ದೇವೆ. ಘಟನೆಯ ಕುರಿತು ಹೆಚ್ಚಿನ ವಿವರಗಳನ್ನು ನಾವು ಖಚಿತಪಡಿಸಿಕೊಳ್ಳುತ್ತಿದ್ದೇವೆ. ಭಾರತೀಯ ಪ್ರಜೆಗಳ ಸುರಕ್ಷತೆ ಮತ್ತು ಯೋಗಕ್ಷೇಮವನ್ನು ಖಚಿತಪಡಿಸಿಕೊಳ್ಳಲು ಸಾಧ್ಯವಿರುವ ಎಲ್ಲ ಸಹಾಯವನ್ನು ಒದಗಿಸುತ್ತೇವೆ. ಆದಾಗ್ಯೂ, ಪ್ರಸ್ತುತ ಸಂಘರ್ಷದ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ನಿಖರವಾದ ಮಾಹಿತಿ ಪ್ರಸ್ತುತ ಲಭ್ಯವಿಲ್ಲ. ಘಟನೆಯ ಸಂದರ್ಭಗಳು ಮತ್ತು ಸತ್ಯಗಳನ್ನು ಸ್ಥಾಪಿಸಲು ನಾವು ವಿವಿಧ ಪಕ್ಷಗಳನ್ನು ಸಂಪರ್ಕಿಸಿದ್ದು, ಅಧಿಕೃತ ಮಾಹಿತಿ ಲಭ್ಯವಾದ ತಕ್ಷಣ ಈ ಕುರಿತು ಮಾಹಿತಿ ನೀಡುತ್ತೇವೆ” ಎಂದು ತಿಳಿಸಿದೆ.
