'Fauji' shook the British from Berlin to Kolkata; 'File No. 25' glimpses on actor Prabhas' birthday -
ಹೈದರಾಬಾದ್: ರೆಬೆಲ್ ಸ್ಟಾರ್ ಪ್ರಭಾಸ್ ಅವರ ಬಹುನಿರೀಕ್ಷಿತ ಪ್ಯಾನ್-ಇಂಡಿಯಾ ಪೀರಿಯಡ್ ಆಕ್ಷನ್ ಸಿನಿಮಾ ‘ಫೌಜಿ’ಯ ಗ್ಲಿಂಪ್ಸ್ ‘ಫೈಲ್ ನಂ 25’ ಬಿಡುಗಡೆಯಾಗಿದೆ. ಹನು ರಾಘವಪುಡಿ ನಿರ್ದೇಶನದಲ್ಲಿ, ಮೈತ್ರಿ ಮೂವಿ ಮೇಕರ್ಸ್ ಸಂಸ್ಥೆಯ ನಿರ್ಮಾಣ ಹಾಗೂ ಟಿ-ಸೀರೀಸ್ ಪ್ರಸ್ತುತಿಯಲ್ಲಿ ಮೂಡಿಬರುತ್ತಿರುವ ಈ ಚಿತ್ರದ ನೂತನ ತುಣುಕನ್ನು ಪ್ರಭಾಸ್ ಅವರ ಜನ್ಮದಿನದ ಪ್ರಯುಕ್ತ ಅಭಿಮಾನಿಗಳಿಗೆ ಉಡುಗೊರೆಯಾಗಿ ನೀಡಲಾಗಿದೆ. ನವೀನ್ ಯೆರ್ನೇನಿ, ವೈ. ರವಿಶಂಕರ್ ಮತ್ತು ಭೂಷಣ್ ಕುಮಾರ್ ಜಂಟಿಯಾಗಿ ಬಂಡವಾಳ ಹೂಡಿರುವ ಈ ಚಿತ್ರದಲ್ಲಿ ಪ್ರಭಾಸ್ ಅವರು ಈವರೆಗೂ ಕಾಣಿಸಿಕೊಳ್ಳದ ರೋಲ್ನಲ್ಲಿ ಕಾಣಿಸಿಕೊಂಡು ಸಂಚಲನ ಮೂಡಿಸಿದ್ದಾರೆ.
ಈ ಗ್ಲಿಂಪ್ಸ್ ಎರಡನೇ ಮಹಾಯುದ್ಧದ ರೋಚಕ ಹಿನ್ನೆಲೆಯೊಂದಿಗೆ ತೆರೆದುಕೊಳ್ಳುತ್ತದೆ. ಮೇ 29, 1942 ರಂದು ಬರ್ಲಿನ್ನಲ್ಲಿ ನೇತಾಜಿ ಸುಭಾಷ್ ಚಂದ್ರ ಬೋಸ್ ಮತ್ತು ಅಡಾಲ್ಫ್ ಹಿಟ್ಲರ್ ನಡುವೆ ನಡೆದ ಮಾತುಕತೆಯಿಂದ ಕಥೆ ಆರಂಭವಾಗುತ್ತದೆ. ಭಾರತದಲ್ಲಿನ ಬ್ರಿಟಿಷ್ ದಾಸ್ಯದ ವಿರುದ್ಧದ ಹೋರಾಟಕ್ಕೆ ಬೋಸ್ ಅವರು ಜರ್ಮನಿಯ ನೆರವು ಕೋರಿದಾಗ, ಎರಡು ಶತಮಾನಗಳ ಕಾಲ ಆಳಿದ ಬ್ರಿಟಿಷ್ ಸಾಮ್ರಾಜ್ಯವನ್ನು ಭಾರತೀಯರು ಹಿಮ್ಮೆಟ್ಟಿಸಲು ಸಾಧ್ಯವೇ ಎಂದು ಹಿಟ್ಲರ್ ಅನುಮಾನ ವ್ಯಕ್ತಪಡಿಸುತ್ತಾನೆ. ಇದಕ್ಕೆ ನೇತಾಜಿ, ಸ್ವಾತಂತ್ರ್ಯ ಪಡೆಯುವ ದೃಢಸಂಕಲ್ಪವನ್ನು ಜಗತ್ತಿನ ಯಾವುದೇ ಶಕ್ತಿಯೂ ತಡೆಯಲು ಸಾಧ್ಯವಿಲ್ಲ ಎಂದು ದಿಟ್ಟ ಪ್ರತ್ಯುತ್ತರ ನೀಡುತ್ತಾರೆ.
ಮಾತುಕತೆಯು ಮುಂದುವರಿಯುತ್ತಾ ಸೇನಾ ಶಕ್ತಿಗಿಂತಲೂ ಗೂಢಚಾರಿಕೆಯ ಬುದ್ಧಿವಂತಿಕೆಯೇ ಹೆಚ್ಚು ಬಲಶಾಲಿ ಎಂಬ ವಿಚಾರಕ್ಕೆ ತಿರುಗುತ್ತದೆ. ಈ ಹಂತದಲ್ಲಿ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರು ಬ್ರಿಟಿಷ್ ಗುಪ್ತಚರ ಜಾಲಕ್ಕೇ ನಡುಕ ಹುಟ್ಟಿಸಿರುವ ಭಾರತೀಯ ರಹಸ್ಯ ಅಧಿಕಾರಿಯೊಬ್ಬನ ಕುರಿತು ಪ್ರಸ್ತಾಪಿಸುತ್ತಾರೆ. ತನ್ನ ಗುರುತನ್ನು ಗೌಪ್ಯವಾಗಿಟ್ಟುಕೊಂಡೇ ಬ್ರಿಟಿಷ್ ಸೇನಾಪಡೆಗಳನ್ನು ಹಾದಿತಪ್ಪಿಸಿ, ಅವರ ಬೃಹತ್ ಯೋಜನೆಗಳನ್ನು ವಿಫಲಗೊಳಿಸುತ್ತಿರುವ ಈ ನಿಗೂಢ ವ್ಯಕ್ತಿ, ಭಗವದ್ಗೀತೆಯಿಂದ ಪ್ರೇರಿತವಾದ ಅತ್ಯಂತ ಸಂಕೀರ್ಣವಾದ ಸೀಕ್ರೆಟ್ ಕೋಡ್ ಬಳಸುತ್ತಿರುತ್ತಾನೆ. ಜರ್ಮನಿಯ ವಿಶ್ವವಿಖ್ಯಾತ ‘ಎನಿಗ್ಮಾ ಕೋಡ್’ಗಿಂತಲೂ ಡಿಕೋಡ್ ಮಾಡಲು ಕಷ್ಟಕರವಾಗಿರುವ ಈ ಕೋಡ್ ಮೂಲಕವೇ ಆತ ಕಾರ್ಯಾಚರಣೆ ನಡೆಸುತ್ತಿರುವುದು ಬ್ರಿಟಿಷ್ ಸಾಮ್ರಾಜ್ಯಕ್ಕೆ ಸಿಂಹಸ್ವಪ್ನವಾಗಿ ಪರಿಣಮಿಸಿದೆ ಎಂಬುದು ಈ ಗ್ಲಿಂಪ್ಸ್ನಲ್ಲಿ ಅನಾವರಣಗೊಳ್ಳುತ್ತದೆ.
ಈ ನಿಗೂಢ ಅಧಿಕಾರಿಯೇ ಬ್ರಿಟಿಷರ ಕಡತಗಳಲ್ಲಿ ‘ಫೌಜಿ’ ಎಂದು ನಮೂದಾಗಿರುವ ರೆಬೆಲ್ ಸೈನಿಕ. 1932 ರಿಂದಲೂ ವಸಾಹತುಶಾಹಿ ಆಡಳಿತಕ್ಕೆ ಬೇಕಾಗಿರುವ ಈ ಮೋಸ್ಟ್ ವಾಂಟೆಡ್ ವ್ಯಕ್ತಿಯ ಅಸಲಿ ಹೆಸರು ಯಾರಿಗೂ ತಿಳಿದಿರುವುದಿಲ್ಲ. ಆತ ಪ್ರಸ್ತುತ ಕಲ್ಕತ್ತಾದಲ್ಲಿದ್ದು ಕ್ರಾಂತಿಯ ಕಿಚ್ಚು ಹೊತ್ತಿಸುತ್ತಿದ್ದಾನೆ ಎಂಬ ಸತ್ಯವನ್ನು ಬೋಸ್ ಬಹಿರಂಗಪಡಿಸುತ್ತಿದ್ದಂತೆ ಗ್ಲಿಂಪ್ಸ್ನ ಕೊನೆಯಲ್ಲಿ ಪ್ರಭಾಸ್ ಅವರ ದೃಶ್ಯ ಪ್ರವೇಶವಾಗುತ್ತದೆ. ತುಟಿಗಳ ನಡುವೆ ಉರಿಯುತ್ತಿರುವ ಸಿಗರೇಟು, ಕೈಯಲ್ಲಿ ಬೃಹತ್ ಮೆಷಿನ್ ಗನ್ ಹಿಡಿದು, ಕಣ್ಣುಗಳಲ್ಲಿ ಆಕ್ರೋಶದೊಂದಿಗೆ ಪ್ರಭಾಸ್ ಬ್ರಿಟಿಷ್ ಪಡೆಗಳಿಗೆ ನೇರ ಸವಾಲೊಡ್ಡುವ ದೃಶ್ಯವು ಮೈ ನವಿರೇಳಿಸುವಂತಿದೆ.
ಕೇವಲ ಯುದ್ಧ ಮತ್ತು ಆಕ್ಷನ್ಗೆ ಸೀಮಿತವಾಗದೆ ಸ್ವಾತಂತ್ರ್ಯ ಚಳವಳಿ, ರಹಸ್ಯ ಕಾರ್ಯಾಚರಣೆ, ಗೂಢಚಾರಿಕೆ ಮತ್ತು ಐತಿಹಾಸಿಕ ಘಟನೆಗಳನ್ನು ಸಮರ್ಥವಾಗಿ ಬೆಸೆದಿರುವುದು ‘ಫೌಜಿ’ಯ ಮೇಲಿನ ನಿರೀಕ್ಷೆಯನ್ನು ಮುಗಿಲೆತ್ತರಕ್ಕೇರಿಸಿದೆ. ಚಿತ್ರದಲ್ಲಿ ಪ್ರಭಾಸ್ ಜೋಡಿಯಾಗಿ ಇಮಾನ್ವಿ ನಟಿಸುತ್ತಿದ್ದು, ಮಿಥುನ್ ಚಕ್ರವರ್ತಿ, ಅನುಪಮ್ ಖೇರ್, ಜಯಪ್ರದಾ ಹಾಗೂ ಭಾನು ಚಂದರ್ ಅವರಂತಹ ದಿಗ್ಗಜ ಕಲಾವಿದರು ಮುಖ್ಯ ತಾರಾಗಣದಲ್ಲಿದ್ದಾರೆ. ವಿಶಾಲ್ ಚಂದ್ರಶೇಖರ್ ಅವರ ಸಂಗೀತ, ಸುದೀಪ್ ಚಟರ್ಜಿ ಅವರ ಛಾಯಾಗ್ರಹಣ ಹಾಗೂ ಕೋಟಗಿರಿ ವೆಂಕಟೇಶ್ವರ ರಾವ್ ಅವರ ಸಂಕಲನವಿರುವ ಈ ಬೃಹತ್ ಕ್ಯಾನ್ವಾಸ್ನ ಚಿತ್ರವು 2027ರ ಮಾರ್ಚ್ 19ರಂದು ತೆಲುಗು, ಕನ್ನಡ ಸೇರಿದಂತೆ ಆರು ಭಾಷೆಗಳಲ್ಲಿ ವಿಶ್ವದಾದ್ಯಂತ ತೆರೆಕಾಣಲಿದೆ
