Sting scandal: CM DKSH made a ₹600 crore betel nut deal to finish off Gowda family; HDK alleges – ಸ್ಟಿಂಗ್ ಆಪರೇಷನ್ ಕೋಲಾಹಲದ ತೀವ್ರತೆಯು ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದ್ದು, ಗೌಡರ ಕುಟುಂಬವನ್ನು ಮುಗಿಸಲು ಹಾಲಿ ಸಿಎಂರಿಂದ 600 ಕೋಟಿ ರೂ. ಸುಪಾರಿ ಡೀಲ್ ನಡೆಸಲಾಗಿದೆ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಸಿಎಂ ಡಿಕೆ ಶಿವಕುಮಾರ್ ವಿರುದ್ದ ಗಂಭೀರ ಆರೋಪ ಮಾಡಿದ್ದಾರೆ.ಸ್ಟಿಂಗ್ ಆಪರೇಷನ್ ತನಿಖೆಯ ದಿಕ್ಕು ತಪ್ಪಿಸಲಾಗುತ್ತಿದ್ದು, ಮೂಲ ಹುಡುಕುವುದನ್ನು ಬಿಟ್ಟು ಬಾಲ ಹಿಡಿಯುತ್ತಿದ್ದಾರೆ ಎಂದು ಜೆಡಿಎಸ್ ಕಾರ್ಯಕರ್ತರನ್ನು ತನಿಖೆ ನಡೆಸುತ್ತಿರುವ ಕುರಿತು ಕಿಡಿಕಾರಿದ್ದಾರೆ. ಅಲ್ಲದೆ, ಈ ತನಿಖೆ ಕುರಿಂತೆ ಸ್ವತಃ ಸಿದ್ದರಾಮಯ್ಯ ಅವರಲ್ಲೇ ಅನುಮಾನಗಳಿವೆ ಎಂದು ತಿಳಿಸಿದ್ದಾರೆ.
- ಸ್ಟಿಂಗ್ ಕೋಲಾಹಲದ ನಡುವೆ ಗೌಡರ ಕುಟುಂಬ ಮುಗಿಸಲು ಹಾಲಿ ಸಿಎಂ ಡಿಕೆ ಶಿವಕುಮಾರ್ 600 ಕೋಟಿ ಸುಪಾರಿ ಡೀಲ್ ನೀಡಿದ್ದಾರೆ ಎಂದು ಹೆಚ್ಡಿಕೆ ಗಂಭೀರ ಆರೋಪ.
- ಸ್ಟಿಂಗ್ ಆಪರೇಷನ್ ತನಿಖೆಯಲ್ಲಿ ಮೂಲ ಹುಡುಕುವುದು ಬಿಟ್ಟು ಬಾಲ ಹಿಡಿಯುತ್ತಿದ್ದಾರೆ ಎಂದು ಜೆಡಿಎಸ್ ಕಾರ್ಯಕರ್ತ ವಿರುದ್ಧದ ತನಿಖೆಗೆ ಹೆಚ್ಡಿಕೆ ಕಿಡಿ.
- ಸ್ಟಿಂಗ್ ಆಪರೇಷನ್ ತನಿಖೆ ಬಗ್ಗೆ ಸಿದ್ದರಾಮಯ್ಯಗೆ ಅನುಮಾನವಿದೆ ಎಂದು ಹೇಳಿಕೆ.
![]()
ಬೆಂಗಳೂರು: ಅ.26 ರಾಜ್ಯದಲ್ಲಿ ಭುಗಿಲೆದ್ದಿರುವ ಸ್ಟಿಂಗ್ ಆಪರೇಷನ್ ಕೋಲಾಹಲದ ನಡುವೆ ಈ ತನಿಖೆಯ ಹಾದಿಯನ್ನು ತಪ್ಪಿಸಲಾಗುತ್ತಿದೆ, ಅಲ್ಲದೆ, ಗೌಡರ ಕುಟುಂಬವನ್ನು ಮುಗಿಸಲು ಕುತಂತ್ರ ನಡೆಯುತ್ತಿದೆ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಆರೋಪ ಮಾಡಿದ್ದಾರೆ.
”ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಕುಟುಂಬವನ್ನು ಮುಗಿಸಲು ಹಾಲಿ ಸಿಎಂ 600 ಕೋಟಿ ರೂ. ಬೃಹತ್ ಮೊತ್ತದ ಡೀಲ್ ಕೊಟ್ಟಿದ್ದಾರೆ. ಈ ವಿಷಯದಲ್ಲಿ ಯಾವುದೇ ಸಂಶಯವಿಲ್ಲ,” ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ.
ಸುದ್ದಿಗಾರರೊಂದಿಗೆ ಭಾನುವಾರ ಮಾತನಾಡಿದ ಹೆಚ್ಡಿಕೆ, ”ಈಗಿನ ಮಹಾನ್ ಮುಖ್ಯಮಂತ್ರಿ ನಮ್ಮ ಕುಟುಂಬವನ್ನು ಮುಗಿಸಲು ನಡೆಸಿರುವ ಕುತಂತ್ರ ಒಂದೆರಡಲ್ಲ. ಅನೇಕ ಕುತಂತ್ರಗಳನ್ನು ಅವರು ಮಾಡಿದ್ದು ಅದರಲ್ಲಿ 600 ಕೋಟಿ ರೂ. ಸುಪಾರಿ ಡೀಲ್ ಕೂಡ ಒಂದು. ಅವರು ಈ ಕೃತ್ಯ ಎಸಗಿದ್ದಾರೆ ಎಂಬುದರಲ್ಲಿ ಸಂಶಯವೇ ಇಲ್ಲ,” ಎಂದು ಆಪಾದಿಸಿದರು.
ʼಕೇಳಿದ್ದನ್ನು ಕೊಡಿ, ತನಿಖೆಗೆ ಸಹಕರಿಸಿʼ : ”ಹಾಗಾಗಿಯೇ ಇದೆಲ್ಲವನ್ನೂ ತನಿಖೆ ಮಾಡಬೇಕೆಂದು ನಾನು ಹೇಳಿದ್ದೇನೆ. ಸ್ಟಿಂಗ್ ಮಾಡಿದ ಪಾತಕಿಗಳನ್ನು ಬಂಧಿಸಿ ಎಂದರೆ ಅವರಿಗೆ ಸುರಕ್ಷಿತವಾಗಿ ನಿರೀಕ್ಷಣಾ ಜಾಮೀನು ಸಿಗುವಂತೆ ಮಾಡಿ ಅದಕ್ಕೆ ಸಂಬಂಧ ಇಲ್ಲದವರನ್ನು ಕಾಡುತ್ತಿದ್ದಾರೆ. ಇವರ ಪಾಪದ ಕೊಡ ತುಂಬಿದೆ. ಆ ಭಗವಂತನೇ ಇದೆಲ್ಲವನ್ನು ಹೊರಗೆ ತರುತ್ತಿದ್ದಾನೆ,” ಎಂದು ಹೇಳಿದರು.
”ರಾಜ್ಯದಲ್ಲಿ ಹಲವಾರು ಸಮಸ್ಯೆಗಳಿವೆ. ಅವುಗಳ ನಡುವೆ ಒಂದು ಸೂಕ್ಷ್ಮ ವಿಚಾರದ ತನಿಖೆ ನಡೆಯುತ್ತಿದೆ. ಇನ್ನೂ 5 ದಿನ ಸಮಯ ಕೊಡುತ್ತೇನೆ. ಏನು ಮಾಡುತ್ತಾರೋ ನೋಡೋಣ. ನಮ್ಮ ಯುವಕರು ಭಯಪಡುವುದು ಬೇಡ. ಪೊಲೀಸರ ತನಿಖೆಗೆ ಸಹಕರಿಸಿ. ಅವರು ಕರೆದಾಗ ಹೋಗಿ. ಕೇಳಿದ ಉಪಕರಣಗಳನ್ನು ಕೊಡಿ. ಆಗ ಇವರ ತನಿಖೆ ಯಾವ ದಿಕ್ಕಿನತ್ತ ಹೋಗುತ್ತಿದೆ ಎಂದು ತಿಳಿಯುತ್ತದೆ. ನನಗೂ ಒಳಗೆ ಏನು ನಡೆಯುತ್ತಿದೆ ಎಂಬ ಮಾಹಿತಿ ಇದೆ,”ಎಂದರು.
ತನಿಖೆ ಬಗ್ಗೆ ಸಿದ್ದುಗೂ ಅನುಮಾನ : ” ಸಿದ್ದರಾಮಯ್ಯ ಹಾಗೂ ಅವರ ಪುತ್ರ ಯತೀಂದ್ರ ಹೇಳಿಕೆಯನ್ನೂ ಗಮನಿಸಿದ್ದೇನೆ. ಈ ತನಿಖೆ ಬಗ್ಗೆ ಸಿದ್ದರಾಮಯ್ಯ ಅವರಲ್ಲೂ ಅನುಮಾನವಿದೆ. ಒಬ್ಬ ವ್ಯಕ್ತಿ ಹಾಗೂ ಕಾಂಗ್ರೆಸ್ ಪಕ್ಷದ ಕಾರ್ಯಕರ್ತೆ ಈ ಸ್ಟಿಂಗ್ ಆಪರೇಷನ್ ಮಾಡಿದ್ದಾರೆ. ಮಾಜಿ ಸಿಎಂಗೆ ಆಗಿರುವ ಅನ್ಯಾಯದ ಬಗ್ಗೆ ಅಸಲಿ ಅಪರಾಧಿಗಳನ್ನು ಹಿಡಿಯಬೇಕಲ್ಲವೇ? ಮೂಲವನ್ನು ಹುಡುಕುವುದು ಬಿಟ್ಟು ಇವರು ಬಾಲವನ್ನು ಬಡಿಯುತ್ತಾ ಕೂತಿದ್ದಾರೆ,” ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಯತೀಂದ್ರ ಹೇಳಿದ್ದನ್ನು ಗೃಹ ಸಚಿವರು ಕೇಳಿಸಿಕೊಂಡಿಲ್ಲವೇ? ಸಿದ್ದರಾಮಯ್ಯ ಅವರು ಹೇಳಿದ್ದನ್ನೂ ಅವರು ಕೇಳಿರಬೇಕಲ್ಲವೇ? ಇಷ್ಟೆಲ್ಲ ಮಾತನಾಡುವ ಪ್ರಿಯಾಂಕ್ ಖರ್ಗೆ ಸ್ಟಿಂಗ್ ಆಪರೇಷನ್ ವಿಡಿಯೋಗಳನ್ನು ನೋಡಿರುವುದಿಲ್ಲವೇ? ಹಾಗಾದರೆ ಅವರು ಯಾರನ್ನು, ಯಾರ ಒತ್ತಡ, ಆದೇಶದ ಮೇರೆಗೆ ರಕ್ಷಣೆ ಮಾಡುತ್ತಿದ್ದಾರೆ ಎಂಬುದನ್ನು ಹೇಳಬೇಕಲ್ಲವೇ,” ಎಂದು ಪ್ರಶ್ನೆ ಮಾಡಿದರು.
ಸಾವುಗಳ ತನಿಖೆ ನಡೆಸಿ : ”ವಿಕಾಸ್ (ವಿಕ್ಕಿ) ಅನುಮಾಸ್ಪದ ಸಾವಿನ ಬಗ್ಗೆ ಚರ್ಚೆಯಾಗುತ್ತಿದೆ. ಸ್ಟಿಂಗ್ ಮಾಡಿದ ಆ ವ್ಯಕ್ತಿಯ ಸಂಸ್ಥೆಯಲ್ಲಿ ಆಗಿರುವ ಘಟನೆ ಬಗ್ಗೆ ಗೃಹ ಸಚಿವರು ದಾಖಲೆ ಕೇಳುತ್ತಾರೆ. ಲಿಫ್ಟ್ ಬಿದ್ದು ಈ ಸಾವಾಗಿದೆ ಎನ್ನುತ್ತಾರೆ. ಸರಿಯಾದ ತನಿಖೆ ನಡೆಸದೆ ಇಡೀ ಪ್ರಕರಣವನ್ನೇ ಮುಚ್ಚಿ ಹಾಕಿದ್ದಾರೆ. ಸ್ಟಿಂಗ್ ಪಿನ್ ನಡೆಸುತ್ತಿರುವ ಮಾಧ್ಯಮ ಸಂಸ್ಥೆಯಲ್ಲಿ ಅನೇಕ ಅಕ್ರಮಗಳು, ಅಪರಾಧಗಳು ನಡೆದಿವೆ. ಎಷ್ಟೋ ಕೊಲೆಗಳಾಗಿವೆ. ಕೋಲಾರ ಬಳಿ ಒಬ್ಬ ಡ್ರೈವರ್ ಕೊಲೆಯಾಗಿರುವ ಮಾಹಿತಿಗಳು ಬರುತ್ತಿವೆ. ಅಂತಹ ಕೊಲೆಗಡಕರನ್ನು ಬಿಟ್ಟು ನಮ್ಮ ಹುಡುಗರ ಬೆನ್ನು ಬಿದ್ದಿದ್ದಾರೆ. ನಮ್ಮ ಹುಡುಗರನ್ನು ಕೂಡ ತನಿಖೆ ಮಾಡಿ. ಏನಿದೆಯೋ ಎಲ್ಲಾ ಹೊರಗೆ ಬರಲಿ. ನಾನೇ ಸ್ಟಿಂಗ್ ಮಾಡಿದ್ದು, ಏನೀಗ? ನಾನು ಕಿಂಗ್ ಆಫ್ ಸ್ಟಿಂಗ್! ಎಂದು ಕೊಚ್ಚಿಕೊಂಡ ಕಿಡಿಗೇಡಿಯನ್ನು ಹಾಗೆಯೇ ಬಿಟ್ಟಿದ್ದೀರಿ. ಯಾಕೆ,” ಎಂದು ಪ್ರಶ್ನಿಸಿದರು.
ಅಗತ್ಯ ಬಿದ್ದರೆ ಸಿದ್ದು ಭೇಟಿ : ”ಸಿದ್ದರಾಮಯ್ಯ ಅವರನ್ನು ಭೇಟಿಯಾಗಬೇಕು ಅಂತ ನಾನು ಹೇಳಿದ್ದಲ್ಲ. ಅವರು ಹಿರಿಯರಿದ್ದಾರೆ. ಅಗತ್ಯ ಬಿದ್ದರೆ ಭೇಟಿ ಮಾಡುತ್ತೇನೆ. ಸಿದ್ದರಾಮಯ್ಯ ಅವರನ್ನು ಕಾಂಗ್ರೆಸ್ನವರೇ ಸೇರಿಕೊಂಡು ಮುಗಿಸಲು ಹೊರಟಿದ್ದಾರೆ. ಅದೆಲ್ಲ ತನಿಖೆ ಆಗಲಿ,” ಎಂದು ಹೇಳಿದರು.
