Tirupati https://en.wikipedia.org/wiki/Tirupati
ತಿಮ್ಮಪ್ಪನ ಮೊದಲ ಆರತಿಯಲ್ಲಿ ಕರ್ನಾಟಕದ ಸಚಿವರು, ಶಾಸಕರಿಗೂ ಅವಕಾಶ: ಸಿಎಂ ಘೋಷಣೆ
ತಿರುಪತಿ ತಿರುಮಲ ದೇವಸ್ಥಾನದಲ್ಲಿ ಪ್ರತಿದಿನ ನೆರವೇರಿಸಲಾಗುವ ಮೊದಲ ಆರತಿಯಲ್ಲಿ ಇನ್ನು ಮುಂದೆ ಕರ್ನಾಟಕದ ಸಚಿವರು, ಶಾಸಕರು, ನ್ಯಾಯಾಧೀಶರು ಹಾಗೂ ಹಿರಿಯ ಅಧಿಕಾರಿಗಳು ಸೇರಿದಂತೆ ಗಣ್ಯ ವ್ಯಕ್ತಿಗಳಿಗೆ ಭಾಗವಹಿಸಲು ಮುಕ್ತ ಅವಕಾಶ ಕಲ್ಪಿಸಲಾಗುವುದು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.

ಬೆಂಗಳೂರು. 13: ಆಂಧ್ರಪ್ರದೇಶದ ಧಾರ್ಮಿಕ ಕ್ಷೇತ್ರ ತಿರುಪತಿ ತಿರುಮಲ ದೇವಸ್ಥಾನದಲ್ಲಿ ಪ್ರತಿದಿನ ನೆರವೇರಿಸಲಾಗುವ ಮೊದಲ ಆರತಿಯಲ್ಲಿ ಇನ್ನು ಮುಂದೆ ಕರ್ನಾಟಕದ ಸಚಿವರು, ಶಾಸಕರು, ನ್ಯಾಯಾಧೀಶರು ಹಾಗೂ ಹಿರಿಯ ಅಧಿಕಾರಿಗಳು ಸೇರಿದಂತೆ ಗಣ್ಯ ವ್ಯಕ್ತಿಗಳಿಗೆ ಭಾಗವಹಿಸಲು ಮುಕ್ತ ಅವಕಾಶ ಕಲ್ಪಿಸಲಾಗುವುದು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ. ಬನಶಂಕರಿಯಲ್ಲಿ ಶ್ರೀ ಷಣ್ಮುಖ ಸುಬ್ರಹ್ಮಣ್ಯ ಸ್ವಾಮಿ ದೇಗುಲದ ಶಿಲಾನ್ಯಾಸ ನೆರವೇರಿಸಿ ಮಾತನಾಡಿದ ಅವರು, ಈ ಕುರಿತು ರಾಜ್ಯ ಸರ್ಕಾರದಿಂದ ಶೀಘ್ರದಲ್ಲೇ ಅಧಿಕೃತ ಪ್ರೋಟೋಕಾಲ್ ಆದೇಶ ಹೊರಡಿಸಲಾಗುವುದು ಎಂದು ತಿಳಿಸಿದ್ದಾರೆ.
ತಿರುಪತಿ ತಿರುಮಲ ದೇವಸ್ಥಾನದಲ್ಲಿ ಪ್ರತಿದಿನ ಬೆಳಿಗ್ಗೆ ಕರ್ನಾಟಕದ ಪರವಾಗಿ ಮೊದಲ ಆರತಿಯನ್ನು ಸಲ್ಲಿಸಲಾಗುತ್ತದೆ. ಈ ಸಂಪ್ರದಾಯಕ್ಕೆ 400 ವರ್ಷಗಳ ಇತಿಹಾಸವಿದೆ. ಹಂಪಿಯ ವಿಜಯನಗರ ಸಾಮ್ರಾಜ್ಯದ ಅರಸರು ಹಾಗೂ ಅವರ ನಂತರ ಮೈಸೂರಿನ
ಒಡೆಯರ್ ರಾಜವಂಶದವರು ತಿರುಪತಿ ವೆಂಕಟೇಶ್ವರ ಸ್ವಾಮಿಗೆ ಅಪಾರ ಪ್ರಮಾಣದ ಚಿನ್ನಾಭರಣ, ಭೂಮಿ ಹಾಗೂ ನಿತ್ಯ ಪೂಜಾ ಕೈಂಕರ್ಯಗಳಿಗೆ ಬೇಕಾದ ಸಾಮಗ್ರಿಗಳನ್ನು ದಾನವಾಗಿ ನೀಡುತ್ತಿದ್ದರು. ಮೈಸೂರು ಸಂಸ್ಥಾನವು ದೇವಸ್ಥಾನದ ದೈನಂದಿನ ಪೂಜಾ ವೆಚ್ಚಗಳನ್ನು ಭರಿಸುತ್ತಿದ್ದರಿಂದ ಮತ್ತು ಸಾಮಗ್ರಿಗಳನ್ನು ಪೂರೈಸುತ್ತಿದ್ದರಿಂದ, ಪ್ರತಿದಿನ ಬೆಳಿಗ್ಗೆ ದೇವರಿಗೆ ಬೆಳಗುವ ಪ್ರಥಮ ಆರತಿಯನ್ನು ಸ್ವೀಕರಿಸುವ ಗೌರವ ಮತ್ತು ಹಕ್ಕು ಮೈಸೂರು ರಾಜರಿಗೆ ಲಭಿಸಿತ್ತು. ಸ್ವಾತಂತ್ರ್ಯಾನಂತರ ರಾಜಪ್ರಭುತ್ವದ ಹಕ್ಕನ್ನು ಕರ್ನಾಟಕ ಸರ್ಕಾರವು ಕಾನೂನುಬದ್ಧವಾಗಿ ಮುಂದುವರಿಸಿಕೊಂಡು ಬಂದಿದೆ.
ಶಿಷ್ಟಾಚಾರದ ಪ್ರಕಾರ ಪ್ರತಿ ಮುಂಜಾನೆ ಗರ್ಭಗುಡಿಯ ಮುಂಭಾಗದಲ್ಲಿ (ಕುಲಶೇಖರ ಪಡಿ) ನಿಂತು ಇಡೀ ಕರ್ನಾಟಕದ ಪರವಾಗಿ ಈ ಮೊದಲ ಆರತಿಯನ್ನು ಹಾಗೂ ದೇವರ ಪ್ರಸಾದವನ್ನು ಕರ್ನಾಟಕದ ಮುಖ್ಯಮಂತ್ರಿಗಳು ಸ್ವೀಕರಿಸಬೇಕು. ಇಲ್ಲಿಯವರೆಗೆ ಅವರ ಅನುಪಸ್ಥಿತಿಯಲ್ಲಿ ರಾಜ್ಯ ಸರ್ಕಾರದ ವತಿಯಿಂದ ನೇಮಕಗೊಂಡ ವಿಶೇಷ ಅಧಿಕಾರಿಯೊಬ್ಬರು ಸ್ವೀಕರಿಸುತ್ತಿದ್ದರು.
ಇನ್ನು ಮುಂದೆ ಕರ್ನಾಟಕ ಸರ್ಕಾರವನ್ನು ಪ್ರತಿನಿಧಿಸಿ ತಿರುಮಲಕ್ಕೆ ಭೇಟಿ ನೀಡುವ ಸಚಿವರು, ಶಾಸಕರು, ಸಂಸದರು, ನ್ಯಾಯಾಧೀಶರು ಹಾಗೂ ಹಿರಿಯ ಐಎಎಸ್-ಐಪಿಎಸ್ ಅಧಿಕಾರಿಗಳಿಗೂ ಈ ಪವಿತ್ರ ಆರತಿ ವೀಕ್ಷಿಸುವ ಮತ್ತು ದೇವರ ದರ್ಶನ ಪಡೆಯುವ ಸೌಲಭ್ಯ ಸಿಗುವಂತೆ ಆದೇಶ ಹೊರಡಿಸಲು ಮುಖ್ಯಮಂತ್ರಿಗಳು ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಈ ಬಗ್ಗೆ ಮಾತನಾಡಿದ ಡಿ.ಕೆ ಶಿವಕುಮಾರ್, ನಮ್ಮ ರಾಜ್ಯದ ಅನೇಕ ಜನಪ್ರತಿನಿಧಿಗಳು ಮತ್ತು ಶಾಸಕರು ತಿರುಪತಿಗೆ ಹೋದಾಗ ಸೂಕ್ತ ದರ್ಶನ ಸಿಗದೆ ಬರಿಗೈಲಿ ವಾಪಸ್ ಬಂದಿದ್ದಾರೆ. ಇನ್ಮುಂದೆ ಕರ್ನಾಟಕದ ಪರವಾಗಿ ಸೇವೆ ಸಲ್ಲಿಸುವ ಎಲ್ಲ ಗಣ್ಯರಿಗೂ ತಿಮ್ಮಪ್ಪನ ಎದುರು ನಿಂತು ಪ್ರಾರ್ಥಿಸುವ ಸೌಭಾಗ್ಯ ಸಿಗಲಿದೆ. ಇದು ನನ್ನ ಮುಖ್ಯಮಂತ್ರಿ ಅಧಿಕಾರಾವಧಿಯ ಅತ್ಯಂತ ಪ್ರಮುಖ ಮತ್ತು ಮಹತ್ವದ ಘೋಷಣೆಯಾಗಿದೆ ಎಂದು ಹೆಮ್ಮೆಯಿಂದ ಹೇಳಿದ್ದಾರೆ.
