TIRUPATI ತಿರುಪತಿಯನ್ನು ರಾಜಕೀಯ ಅಖಾಡವಾಗಿಸಬೇಡಿ, ಆ ಹಕ್ಕು ಕೇವಲ ಮೈಸೂರು ಅರಸರಿಗೆ ಮಾತ್ರ: ಡಿ.ಕೆ.ಶಿವಕುಮಾರ್ ‘ಆರತಿ’ ಪ್ರಸ್ತಾವನೆಗೆ TTD ಗರಂ. ಈ ವಿಶೇಷ ಹಕ್ಕು ಮೈಸೂರು ಮಹಾರಾಜರಿಗೆ ನೀಡಲಾಗಿತ್ತು. ಅದು ಮುಖ್ಯಮಂತ್ರಿ, ಸಚಿವ ಸಂಪುಟ ಅಥವಾ ಶಾಸಕರಿಗಾಗಿ ಅಲ್ಲ. ಈ ರೀತಿಯ ಹೊಸ ನಿಯಮವನ್ನು ಏಕಪಕ್ಷೀಯವಾಗಿ ಜಾರಿಗೆ ತರಲು ಸಾಧ್ಯವಿಲ್ಲ ಎಂದು ಟಿಟಿಡಿ ಹೇಳಿದೆ.

ತಿರುಪತಿ, ಜು.14: ತಿರುಮಲ ಶ್ರೀ ವೆಂಕಟೇಶ್ವರ ಸ್ವಾಮಿ ದೇವಾಲಯದಲ್ಲಿ ಕರ್ನಾಟಕದ ಜನಪ್ರತಿನಿಧಿಗಳು, ಸಚಿವರು ಹಾಗೂ ಹಿರಿಯ ಅಧಿಕಾರಿಗಳಿಗೆ ಪ್ರತಿದಿನ ನಡೆಯುವ ಮೊದಲ ಆರತಿಯಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಪ್ರಸ್ತಾವಕ್ಕೆ ತಿರುಮಲ ತಿರುಪತಿ ದೇವಸ್ಥಾನ (ಟಿಟಿಡಿ) ತೀವ್ರ ವಿರೋಧ ವ್ಯಕ್ತಪಡಿಸಿದೆ.

ವಿಡಿಯೋ ಹೇಳಿಕೆ ಬಿಡುಗಡೆ ಮಾಡಿದ ತಿರುಮಲ ತಿರುಪತಿ ದೇವಸ್ಥಾನ (ಟಿಟಿಡಿ) ಟ್ರಸ್ಟ್ ಸದಸ್ಯ ಜಿ. ಭಾನುಪ್ರಕಾಶ್ ರೆಡ್ಡಿ ಅವರು, “ತಿರುಪತಿ ದೇವಾಲಯವನ್ನು ರಾಜಕೀಯ ವೇದಿಕೆಯನ್ನಾಗಿಸಬೇಡಿ. ಇದು ಪವಿತ್ರ ಧಾರ್ಮಿಕ ಕ್ಷೇತ್ರ. ಸಿಎಂ ಡಿ.ಕೆ. ಶಿವಕುಮಾರ್ ಅವರು ತಮ್ಮ ಹೇಳಿಕೆಯನ್ನು ಹಿಂಪಡೆಯಬೇಕು” ಎಂದು ಆಗ್ರಹಿಸಿದ್ದಾರೆ.
ತಿರುಮಲದಲ್ಲಿ ಪ್ರತಿದಿನ ಬೆಳಿಗ್ಗೆ ನಡೆಯುವ ‘ತಿರುಮಲ ನಿತ್ಯ ಆರತಿ’ ಶ್ರೀ ವೆಂಕಟೇಶ್ವರ ಸ್ವಾಮಿಗೆ ಗರ್ಭಗುಡಿಯಲ್ಲಿ ಸಲ್ಲಿಸುವ ವಿಶೇಷ ಪೂಜೆಯಾಗಿದೆ. ಈ ಸಂದರ್ಭದಲ್ಲಿ ಮಠಾಧೀಶರು, ಮುಖ್ಯ ಅರ್ಚಕರು, ವಿಶೇಷ ಅಧಿಕಾರಿಗಳು ಹಾಗೂ ಐತಿಹಾಸಿಕ ಪರಂಪರೆಯ ಭಾಗವಾಗಿ ಮೈಸೂರು ಮಹಾರಾಜರ ಪ್ರತಿನಿಧಿಯೊಬ್ಬರು ಉಪಸ್ಥಿತರಿರುತ್ತಾರೆಂದು ಹೇಳಿದ್ದಾರೆ.
ಈ ಹಿಂದೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಭಾನುವಾರ, ಕರ್ನಾಟಕದ ಸಚಿವರು, ಶಾಸಕರು, ನ್ಯಾಯಮೂರ್ತಿಗಳು, ಹಿರಿಯ ಅಧಿಕಾರಿಗಳು ಸೇರಿದಂತೆ ರಾಜ್ಯದ ಗಣ್ಯರು ತಿರುಪತಿಗೆ ಭೇಟಿ ನೀಡಿದಾಗ ಮೊದಲ ಆರತಿಯಲ್ಲಿ ಪಾಲ್ಗೊಳ್ಳಲು ಅವಕಾಶ ನೀಡುವಂತೆ ಆದೇಶ ಹೊರಡಿಸಲಾಗುವುದು ಎಂದು ಘೋಷಿಸಿದ್ದರು.
ಈ ಪ್ರಸ್ತಾವನೆಗೆ ಪ್ರತಿಕ್ರಿಯಿಸಿದ ಭಾನುಪ್ರಕಾಶ್ ರೆಡ್ಡಿ, “ಈ ವಿಶೇಷ ಹಕ್ಕು ಮೈಸೂರು ಮಹಾರಾಜರಿಗೆ ನೀಡಲಾಗಿತ್ತು. ಅದು ಮುಖ್ಯಮಂತ್ರಿ, ಸಚಿವ ಸಂಪುಟ ಅಥವಾ ಶಾಸಕರಿಗಾಗಿ ಅಲ್ಲ. ಈ ರೀತಿಯ ಹೊಸ ನಿಯಮವನ್ನು ಏಕಪಕ್ಷೀಯವಾಗಿ ಜಾರಿಗೆ ತರಲು ಸಾಧ್ಯವಿಲ್ಲ” ಎಂದು ಹೇಳಿದ್ದಾರೆ.
