ಮೊಟ್ಟೆ ದರ ಏರಿಕೆ ಎಫೆಕ್ಟ್: ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಪೌಷ್ಟಿಕ ಆಹಾರ ಯೋಜನೆಗೆ ಸಂಕಷ್ಟ, ಅನುದಾನ ಹೆಚ್ಚಳಕ್ಕೆ ಆಗ್ರಹ
ಬೆಂಗಳೂರು, ಜು. 28: ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಗೆ ನೀಡಲಾಗುತ್ತಿರುವ ಪೌಷ್ಟಿಕ ಆಹಾರ ಯೋಜನೆಗೆ ಮೊಟ್ಟೆ ದರ ಏರಿಕೆ ತೀವ್ರ ಹೊಡೆತ ನೀಡಿದೆ. ಮಾರುಕಟ್ಟೆಯಲ್ಲಿ ಮೊಟ್ಟೆಯ ಬೆಲೆ ₹8-9ಕ್ಕೆ ಏರಿಕೆಯಾಗಿರುವ ಹಿನ್ನೆಲೆಯಲ್ಲಿ, ಸರ್ಕಾರದಿಂದ ನೀಡಲಾಗುತ್ತಿರುವ ಅನುದಾನ ಸಾಕಾಗದೆ ಹಲವೆಡೆ ಮೊಟ್ಟೆ ವಿತರಣೆ ಸ್ಥಗಿತಗೊಂಡಿದ್ದು, ಅದರ ಬದಲಿಗೆ ಮಕ್ಕಳಿಗೆ ಬಾಳೆಹಣ್ಣು ನೀಡಲಾಗುತ್ತಿದೆ.
ಪ್ರಸ್ತುತ ರಾಜ್ಯದ 1ರಿಂದ 10ನೇ ತರಗತಿಯವರೆಗೆ ಓದುತ್ತಿರುವ ಸುಮಾರು 55 ಲಕ್ಷ ವಿದ್ಯಾರ್ಥಿಗಳಿಗೆ ವಾರದಲ್ಲಿ ಆರು ದಿನ ಮೊಟ್ಟೆ ವಿತರಿಸುವ ಯೋಜನೆ ಜಾರಿಯಲ್ಲಿದೆ. ಈ ಯೋಜನೆಯಡಿ ಶಾಲಾ ಮಟ್ಟದಲ್ಲಿ ಪ್ರತಿ ಮೊಟ್ಟೆ ಖರೀದಿಗೆ ಸರ್ಕಾರ ₹6 ಅನುದಾನ ನೀಡುತ್ತಿದೆ.
ಆದರೆ ಇತ್ತೀಚೆಗೆ ಮಾರುಕಟ್ಟೆಯಲ್ಲಿ ಮೊಟ್ಟೆಯ ಬೆಲೆ ₹8-9ಕ್ಕೆ ಏರಿಕೆಯಾದರೂ ಸರ್ಕಾರದಿಂದ ಹೆಚ್ಚುವರಿ ಅನುದಾನ ಮಂಜೂರಾಗಿಲ್ಲ. ಶಿಕ್ಷಣ ಇಲಾಖೆ ಈ ಕುರಿತು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದರೂ ಇದುವರೆಗೆ ಅನುಮೋದನೆ ದೊರೆತಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ. ಇದರ ಪರಿಣಾಮವಾಗಿ ಶಾಲಾ ಮುಖ್ಯಶಿಕ್ಷಕರು ಮತ್ತು ಶಿಕ್ಷಕರು ಹೆಚ್ಚುವರಿ ಹಣ ಹೊಂದಿಸಲು ಸಾಧ್ಯವಾಗದೇ ಸಂಕಷ್ಟಕ್ಕೆ ಸಿಲುಕಿದ್ದಾರೆ. ಅನುದಾನ ಕೊರತೆಯಿಂದ ಅನೇಕ ಶಾಲೆಗಳು ಮೊಟ್ಟೆ ನೀಡುವುದನ್ನು ತಾತ್ಕಾಲಿಕವಾಗಿ ನಿಲ್ಲಿಸಿ, ಅದರ ಬದಲಿಗೆ ಬಾಳೆಹಣ್ಣು ವಿತರಿಸುವ ಮೂಲಕ ಮಕ್ಕಳ ಪೌಷ್ಟಿಕ ಆಹಾರ ಯೋಜನೆಯನ್ನು ಮುಂದುವರಿಸುತ್ತಿವೆ.
ಶಿಕ್ಷಕರು ಸರ್ಕಾರವು ಶೀಘ್ರದಲ್ಲೇ ಮೊಟ್ಟೆ ಖರೀದಿ ಅನುದಾನವನ್ನು ಹೆಚ್ಚಿಸಿ ಸಮಸ್ಯೆಗೆ ಪರಿಹಾರ ಕಲ್ಪಿಸಬೇಕೆಂದು ಆಗ್ರಹಿಸಿದ್ದಾರೆ. ಅನುದಾನ ಹೆಚ್ಚಳವಾಗದಿದ್ದರೆ ಪೌಷ್ಟಿಕ ಆಹಾರ ಯೋಜನೆ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಶಿಕ್ಷಣ ವಲಯದಲ್ಲಿ ಆತಂಕ ವ್ಯಕ್ತವಾಗಿದೆ.

