Parappana Agrahara Jail: ಪರಪ್ಪನ ಅಗ್ರಹಾರ ಜೈಲಿನ ಮೇಲೆ ಸಿಸಿಬಿ ದಾಳಿ ನಡೆಸಿದಾಗ ಪ್ರಜ್ವಲ್ ರೇವಣ್ಣ ಬ್ಯಾರಕ್ನಲ್ಲಿ ಮೊಬೈಲ್ ಪತ್ತೆಯಾಗಿದ್ದು, ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಪ್ರಜ್ವಲ್ ರೇವಣ್ಣ ಬ್ಯಾರಕ್ನಲ್ಲಿ ಮೊಬೈಲ್, ಚಾರ್ಜರ್ ಪತ್ತೆಯಾಗಿದೆ. ಆತನ ಮೊಬೈಲ್ನಲ್ಲಿ ಒಟಿಟಿ ಆ್ಯಪ್ಗಳು ಪತ್ತೆಯಾಗಿವೆ ಎಂದು ಡಿಜಿಪಿ ಅಲೋಕ್ ಕುಮಾರ್ ತಿಳಿಸಿದ್ದಾರೆ.
ಬೆಂಗಳೂರು, ಆ. 12: ನಗರದ ಪರಪ್ಪನ ಅಗ್ರಹಾರ ಜೈಲಿನ ಮೇಲೆ ಸಿಸಿಬಿ (CCB) ಅಧಿಕಾರಿಗಳು ದಾಳಿ ನಡೆಸಿದ್ದು, ಈ ವೇಳೆ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಬ್ಯಾರಕ್ ಸೇರಿ ವಿವಿಧೆಡೆ 10ಕ್ಕೂ ಹೆಚ್ಚು ಮೊಬೈಲ್ಗಳು ಪತ್ತೆಯಾಗಿವೆ. ಈ ಬೆನ್ನಲ್ಲೇ ‘ಅಸಿಸ್ಟೆಂಟ್ ಸೂಪರಿಂಟೆಂಡೆಂಟ್ ಈರಣ್ಣರನ್ನು ಸಸ್ಪೆಂಡ್ ಮಾಡಿದ್ದೇನೆ. ಎಸ್ಪಿ ಅನ್ಶುಕುಮಾರ್ಗೆ ನೋಟಿಸ್ ನೀಡಿ ಮಾಹಿತಿ ಕೇಳಿದ್ದೇನೆ’ ಎಂದು ಕಾರಾಗೃಹ ಇಲಾಖೆ ಡಿಜಿಪಿ ಅಲೋಕ್ ಕುಮಾರ್ ಹೇಳಿದ್ದಾರೆ.
ಮೊಬೈಲ್, ಚಾರ್ಜರ್ ಪತ್ತೆ
ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನ ಮೇಲೆ ಸಿಸಿಬಿ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರಾಗೃಹ ಇಲಾಖೆ ಡಿಜಿಪಿ ಅಲೋಕ್ ಕುಮಾರ್ ಮಾತನಾಡಿದ್ದು, ‘ನಿನ್ನೆ ಸಿಸಿಬಿ ಪೊಲೀಸರು ಜೈಲಿನ ಮೇಲೆ ದಾಳಿ ನಡೆಸಿದ್ದರು. ಈ ವೇಳೆ ಪ್ರಜ್ವಲ್ ರೇವಣ್ಣ ಬ್ಯಾರಕ್ನಲ್ಲಿ ಮೊಬೈಲ್, ಚಾರ್ಜರ್ ಪತ್ತೆಯಾಗಿದೆ. ಆತನ ಮೊಬೈಲ್ನಲ್ಲಿ ಒಟಿಟಿ ಆ್ಯಪ್ಗಳು ಪತ್ತೆಯಾಗಿವೆ. ಜೈಲಿನ ವೈಫೈ ಏನಾದರೂ ಬಳಕೆ ಆಗಿದೆಯಾ ಎಂದು ಪರಿಶೀಲನೆ ಮಾಡ್ತೀನಿ’ ಎಂದಿದ್ದಾರೆ.
ಈ ಹಿಂದೆ ಸರಬರಾಜು ಆದ ಮೊಬೈಲ್ಗಳು ಇನ್ನೂ ಒಳಗೆ ಇವೆ. ಕೆಲ ದಿನಗಳ ಹಿಂದೆ ನಾವು ದಾಳಿ ಮಾಡಿದ್ದಾಗ ಏನೂ ಸಿಕ್ಕಿರಲಿಲ್ಲ. ಸದ್ಯ ಅಸಿಸ್ಟೆಂಟ್ ಸೂಪರಿಂಟೆಂಡೆಂಟ್ ಈರಣ್ಣರನ್ನು ಸಸ್ಪೆಂಡ್ ಮಾಡಿದ್ದೇನೆ. ಎಸ್ಪಿ ಅನ್ಶುಕುಮಾರ್ಗೆ ನೋಟಿಸ್ ನೀಡಿ ಮಾಹಿತಿ ಕೇಳಿದ್ದೇನೆ’ ಎಂದು ಅವರು ಹೇಳಿದರು.
ಅಧಿಕಾರಿಗಳೇ ಶಾಮೀಲು
‘ಕೈದಿಗಳ ಜೊತೆಗೆ ಜೈಲಿನ ಅಧಿಕಾರಿಗಳೇ ಶಾಮೀಲು ಆಗಿದ್ದಾರೆ. ಅಧಿಕಾರಿಗಳ ಕೈವಾಡ ಗೊತ್ತಾದರೆ ಮುಲಾಜಿಲ್ಲದೆ ಸಸ್ಪೆಂಡ್ ಮಾಡುತ್ತೇನೆ. ಸರ್ಕಾರ ಕೆಲಸ, ಊಟ ಕೊಟ್ಟಿದೆ ಅಂದರೆ ಅದಕ್ಕೆ ನಿಯತ್ತಾಗಿರಬೇಕು’ ಎಂದು ಅಲೋಕ್ಕುಮಾರ್ ಎಚ್ಚರಿಕೆ ನೀಡಿದ್ದಾರೆ.
ಸಿಸಿಬಿ ದಾಳಿ ನಂತರ ಜೈಲು ಅಧಿಕಾರಿಗಳಿಗೆ ಮತ್ತೆ ಎರಡು ಮೊಬೈಲ್ ಸಿಕ್ಕಿವೆ. ಇನ್ನೂ ಶೇ.10ರಷ್ಟು ಮೊಬೈಲ್ಗಳು ಒಳಗೆ ಇರುವ ಸಾಧ್ಯತೆ ಇದೆ’ ಎಂದು ಕಾರಾಗೃಹ ಇಲಾಖೆ ಡಿಜಿಪಿ ಅಲೋಕ್ ಕುಮಾರ್ ಹೇಳಿದ್ದಾರೆ.
