ಬೆಂಗಳೂರು: ರಾಜ್ಯದಲ್ಲಿ ಆಡಳಿತಾರೂಢ ಕಾಂಗ್ರೆಸ್ ಸರ್ಕಾರದ ವಿರುದ್ಧ ಸಾಲು ಸಾಲು ಭ್ರಷ್ಟಾಚಾರದ ಆರೋಪಗಳು ಕೇಳಿಬರುತ್ತಿರುವ ಬೆನ್ನಲ್ಲೇ, ಇದೀಗ ಅಬಕಾರಿ ಇಲಾಖೆಯಲ್ಲಿ ಬರೋಬ್ಬರಿ 6,000 ಕೋಟಿ ರೂಪಾಯಿಗಳ ಬೃಹತ್ ಹಗರಣ ನಡೆದಿದೆ ಎಂದು ಭಾರತೀಯ ಜನತಾ ಪಕ್ಷ (ಬಿಜೆಪಿ) ಬಾಂಬ್ ಸಿಡಿಸಿದೆ. ವಿಧಾನಸೌಧದ ಕೆಂಗಲ್ ಗೇಟ್ ಬಳಿ ಜಂಟಿ ಸುದ್ದಿಗೋಷ್ಠಿ ನಡೆಸಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹಾಗೂ ವಿಪಕ್ಷ ನಾಯಕ ಆರ್. ಅಶೋಕ್ ಅವರು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಬಿ.ವೈ. ವಿಜಯೇಂದ್ರ, “ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ ಮತ್ತು ಅಬಕಾರಿ ಇಲಾಖೆಯು ಲೂಟಿಯ ಕೇಂದ್ರವಾಗಿ ಮಾರ್ಪಟ್ಟಿದೆ. ನಿಯಮಗಳನ್ನು ಗಾಳಿಗೆ ತೂರಿ, ಮನಸೋ ಇಚ್ಛೆ ಮದ್ಯದ ಲೈಸೆನ್ಸ್ಗಳನ್ನು ನೀಡಲಾಗುತ್ತಿದೆ. ವರ್ಗಾವಣೆ ಮತ್ತು ಲೈಸೆನ್ಸ್ ನೀಡಿಕೆ ಹೆಸರಿನಲ್ಲಿ ಸುಮಾರು 6,000 ಕೋಟಿ ರೂಪಾಯಿಗಳಷ್ಟು ಅವ್ಯವಹಾರ ನಡೆದಿದೆ,” ಎಂದು ಗಂಭೀರ ಆರೋಪ ಮಾಡಿದರು.
ಸರ್ಕಾರದ ನಡೆ ಬಂಡತನ
ಸರ್ಕಾರದ ನಡೆಯನ್ನು ‘ಬಂಡತನ’ ಎಂದು ಕರೆದ ಅವರು, ಈ ಹಗರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಸಾಕ್ಷ್ಯವಾಗಿರುವ ಆಡಿಯೋ ಟೇಪ್ಗಳು ಕೂಡ ಲಭ್ಯವಿವೆ. ಆಡಿಯೋದಲ್ಲಿ ಪ್ರಭಾವಿ ವ್ಯಕ್ತಿಗಳ ಹೆಸರು ಪ್ರಸ್ತಾಪವಾಗಿದೆ ಎಂದು ಕಿಡಿಕಾರಿದರು. ಇಲಾಖೆಯಲ್ಲಿ ಅಧಿಕಾರಿಗಳ ಮೇಲೆ ಹಣ ವಸೂಲಿಗೆ ಒತ್ತಡ ಹೇರಲಾಗುತ್ತಿದೆ ಎಂಬ ಮಾತುಗಳು ಕೇಳಿಬರುತ್ತಿದ್ದು, ಇದು ರಾಜ್ಯದ ಬೊಕ್ಕಸಕ್ಕೆ ನಷ್ಟವುಂಟು ಮಾಡುತ್ತಿದೆ ಎಂದು ವಿಪಕ್ಷ ನಾಯಕರು ದೂರಿದರು.
ವಾಲ್ಮೀಕಿ ನಿಗಮ ಮತ್ತು ಮುಡಾ ಹಗರಣದ ನಂತರ, ಇದೀಗ ಅಬಕಾರಿ ಹಗರಣವು ಸರ್ಕಾರಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಈ ಕೂಡಲೇ ಮುಖ್ಯಮಂತ್ರಿಗಳು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಹಾಗೂ ಈ ಹಗರಣವನ್ನು ಸಿಬಿಐ ಅಥವಾ ಉನ್ನತ ಮಟ್ಟದ ತನಿಖೆಗೆ ಒಪ್ಪಿಸಬೇಕು ಎಂದು ಬಿಜೆಪಿ ನಾಯಕರು ಆಗ್ರಹಿಸಿದ್ದಾರೆ.
ಇದನ್ನೂ ಓದಿ | ವಿಧಾನಸಭೆಯಲ್ಲಿ ‘ಲಂಚ’ದ ಗದ್ದಲ: ಅಬಕಾರಿ ಸಚಿವ ತಿಮ್ಮಾಪುರ ರಾಜೀನಾಮೆಗೆ ವಿಪಕ್ಷಗಳ ಪಟ್ಟು
ರಾಜೀನಾಮೆ ನೀಡಲ್ಲ, ನನ್ನ ವಿರುದ್ಧ ಸಾಕ್ಷ್ಯವಿಲ್ಲ:
ಅಬಕಾರಿ ಇಲಾಖೆಯಲ್ಲಿನ ಹಗರಣದ ಆರೋಪದ ಹಿನ್ನೆಲೆಯಲ್ಲಿ ತಮ್ಮ ರಾಜೀನಾಮೆಗೆ ಪಟ್ಟು ಹಿಡಿದಿರುವ ಬಿಜೆಪಿಗೆ ಅಬಕಾರಿ ಸಚಿವ ಆರ್.ಬಿ. ತಿಮ್ಮಾಪುರ್ ವಿಧಾನಸೌಧದಲ್ಲಿ ಪ್ರತಿಕ್ರಿಯಿಸಿ, “ಕೇವಲ ಆರೋಪ ಮಾಡಿದ ತಕ್ಷಣ ರಾಜೀನಾಮೆ ನೀಡಲು ಸಾಧ್ಯವಿಲ್ಲ. ನನ್ನ ವಿರುದ್ಧ ಯಾವುದೇ ಸಾಕ್ಷಿ-ಪುರಾವೆಗಳಿಲ್ಲ. ಯಾರೋ ಅಧಿಕಾರಿ ಮಾತನಾಡಿದರೆ ಅದಕ್ಕೆ ನಾನು ಹೊಣೆಯಲ್ಲ; ತಪ್ಪು ಮಾಡಿದವರು ಶಿಕ್ಷೆ ಅನುಭವಿಸುತ್ತಾರೆ,” ಎಂದು ಸ್ಪಷ್ಟಪಡಿಸಿದರು.
“ಈಶ್ವರಪ್ಪ ಪ್ರಕರಣದಲ್ಲಿ ಡೆತ್ನೋಟ್ ಇತ್ತು, ಇಲ್ಲಿ ಆಧಾರವಿಲ್ಲ. ಬಿಜೆಪಿ ನಾಯಕರು ಒತ್ತಡಕ್ಕೆ ಮಣಿದು ಪ್ರತಿಭಟನೆ ಮಾಡುತ್ತಿದ್ದಾರೆ. ನಾನು ಸಿಎಂ ಅವರನ್ನು ಭೇಟಿಯಾಗಿದ್ದು, ಅವರು ನನ್ನ ಬಳಿ ಈ ಬಗ್ಗೆ ಯಾವುದೇ ವಿವರಣೆ ಕೇಳಿಲ್ಲ,” ಎಂದು ಸಚಿವರು ತಿಳಿಸಿದರು.
