ಬೆಳಗಾವಿ: ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿದ್ದ ಮತ್ತು ನಾಗರಿಕ ಸಮಾಜ ತಲೆತಗ್ಗಿಸುವಂತೆ ಮಾಡಿದ್ದ ಬೆಳಗಾವಿಯ ವಂಟಮೂರಿ (Vantamuri) ಗ್ರಾಮದ ಮಹಿಳೆ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಂತಿಮ ತೀರ್ಪು ಹೊರಬಿದ್ದಿದೆ.
ಮಹಿಳೆಯನ್ನು ವಿವಸ್ತ್ರಗೊಳಿಸಿ, ವಿದ್ಯುತ್ ಕಂಬಕ್ಕೆ ಕಟ್ಟಿ ಹಾಕಿ ಹಲ್ಲೆಗೈದ ಅಮಾನವೀಯ ಪ್ರಕರಣದಲ್ಲಿ ದೋಷಿಗಳೆಂದು ಸಾಬೀತಾದ 12 ಅಪರಾಧಿಗಳಿಗೆ ಬೆಳಗಾವಿಯ 10ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು 5 ವರ್ಷಗಳ ಕಠಿಣ ಜೈಲು ಶಿಕ್ಷೆಯನ್ನು ವಿಧಿಸಿದೆ.
ಪ್ರಕರಣದ ವಿಚಾರಣೆ ನಡೆಸಿದ ನ್ಯಾ. ಎಚ್.ಎಸ್. ಮಂಜುನಾಥ ಅವರು, ಈ ಕೃತ್ಯವು ಸಮಾಜದ ಸ್ವಾಸ್ಥ್ಯ ಕೆಡಿಸುವಂತಹದ್ದು ಎಂದು ಅಭಿಪ್ರಾಯಪಟ್ಟಿದ್ದಾರೆ. ಭಾರತೀಯ ದಂಡ ಸಂಹಿತೆಯ (IPC) ವಿವಿಧ ಸೆಕ್ಷನ್ಗಳ ಅಡಿಯಲ್ಲಿ ಅಪರಾಧಿಗಳಿಗೆ ಶಿಕ್ಷೆ ಮತ್ತು ದಂಡವನ್ನು ವಿಧಿಸಲಾಗಿದೆ. ಈ ಘಟನೆಯು ಮಹಿಳೆಯ ಘನತೆಗೆ ಧಕ್ಕೆ ತಂದಿರುವುದಲ್ಲದೆ, ಕಾನೂನು ಸುವ್ಯವಸ್ಥೆಯ ಮೇಲೂ ಗಂಭೀರ ಪ್ರಶ್ನೆಗಳನ್ನು ಎತ್ತಿತ್ತು. ಇದೀಗ ನ್ಯಾಯಾಲಯದ ತೀರ್ಪಿನ ಮೂಲಕ ಸಂತ್ರಸ್ತ ಮಹಿಳೆಗೆ ನ್ಯಾಯ ಒದಗಿಸುವ ಕೆಲಸವಾಗಿದೆ.
ಘಟನೆಯ ಹಿನ್ನೆಲೆ (ಡಿಸೆಂಬರ್ 11, 2023):
ಘಟನೆ ನಡೆದಿದ್ದು 2023ರ ಡಿಸೆಂಬರ್ 11 ರಂದು. ವಂಟಮೂರಿ ಗ್ರಾಮದ ಯುವಕನೋರ್ವ ಯುವತಿಯನ್ನು ಪ್ರೀತಿಸಿ ಓಡಿ ಹೋಗಿದ್ದನು. ಇದರಿಂದ ರೊಚ್ಚಿಗೆದ್ದ ಯುವತಿಯ ಕಡೆಯವರು, ಯುವಕನ ತಾಯಿ (42 ವರ್ಷ) ಎಂಬ ಒಂದೇ ಕಾರಣಕ್ಕೆ ಆಕೆಯ ಮನೆಗೆ ನುಗ್ಗಿ ಎಳೆದು ತಂದಿದ್ದರು. ಗ್ರಾಮದ ರಸ್ತೆಯಲ್ಲಿ ಆಕೆಯನ್ನು ವಿವಸ್ತ್ರಗೊಳಿಸಿ, ವಿದ್ಯುತ್ ಕಂಬಕ್ಕೆ ಕಟ್ಟಿ ಹಾಕಿ ಅಮಾನುಷವಾಗಿ ಹಲ್ಲೆ ನಡೆಸಿದ್ದರು. ಈ ಘಟನೆ ನಡೆದಾಗ ಗ್ರಾಮಸ್ಥರು ಮೂಕಪ್ರೇಕ್ಷಕರಾಗಿದ್ದರು ಎಂಬುದು ಪ್ರಕರಣದ ಮತ್ತೊಂದು ಕರಾಳ ಮುಖವಾಗಿತ್ತು.
ಇದನ್ನೂ ಓದಿ | ಜಗತ್ತನ್ನೇ ಬೆಚ್ಚಿಬೀಳಿಸಿದ ಎಪ್ಸ್ಟೀನ್ ಫೈಲ್ಸ್: ಶ್ರೀಮಂತರ ರಹಸ್ಯಗಳು ಬಯಲು?
ಕಾನೂನು ಹೋರಾಟ ಮತ್ತು ಹೈಕೋರ್ಟ್ ಚಾಟಿ:
ಘಟನೆಯ ತೀವ್ರತೆಯನ್ನು ಪರಿಗಣಿಸಿ ಕಾಕತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಘಟನೆಯ ನಂತರ ಹೈಕೋರ್ಟ್ ಕೂಡ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡು, ತನಿಖೆಯನ್ನು ಚುರುಕುಗೊಳಿಸಲು ಮತ್ತು ಸಂತ್ರಸ್ತೆಗೆ ಪರಿಹಾರ ಒದಗಿಸಲು ಸರ್ಕಾರಕ್ಕೆ ಸೂಚಿಸಿತ್ತು. ಪೊಲೀಸರು ತ್ವರಿತಗತಿಯಲ್ಲಿ ತನಿಖೆ ನಡೆಸಿ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಸುದೀರ್ಘ ವಿಚಾರಣೆಯ ನಂತರ, ಇದೀಗ ನ್ಯಾಯಾಲಯವು 12 ಜನ ಆರೋಪಿಗಳನ್ನು ಅಪರಾಧಿಗಳೆಂದು ಘೋಷಿಸಿ ಐದು ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಯನ್ನು ಪ್ರಕಟಿಸಿದೆ.
