ಬೆಂಗಳೂರು: ಅಬಕಾರಿ ಇಲಾಖೆಯಲ್ಲಿ ನಡೆದಿದೆ ಎನ್ನಲಾದ ಭಾರಿ ಭ್ರಷ್ಟಾಚಾರದ ಆರೋಪದ ಹಿನ್ನೆಲೆಯಲ್ಲಿ ಸಚಿವ ಆರ್.ಬಿ. ತಿಮ್ಮಾಪುರ (R.B. Thimmapur) ರಾಜೀನಾಮೆಗೆ ಆಗ್ರಹಿಸಿ ಅಹೋರಾತ್ರಿ ಧರಣಿ ನಡೆಸಿದ ಬಿಜೆಪಿ ಸದಸ್ಯರು, ಸದನದ ಬಾವಿಗಿಳಿದು ಪ್ರತಿಭಟನೆ ಮುಂದುವರಿಸಿದಾಗ, ಕಾಂಗ್ರೆಸ್ ಶಾಸಕ ಕೆ.ಎಂ. ಶಿವಲಿಂಗೇಗೌಡ (K.M. Shivalinge Gowda) ಅವರು “ಲೇ ಆರೆಸ್ಸೆಸ್ಸು.. ಆರೆಸ್ಸೆಸ್ಸು.. ಥೂ ನಿಮ್ಮ ಯೋಗ್ಯತೆಗೆ ಬೆಂಕಿ ಹಾಕಾ..” ಎಂದು ಪ್ರತಿಪಕ್ಷದ ನಾಯಕರ ವಿರುದ್ಧ ಏಕವಚನದಲ್ಲೇ ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸಿದ್ದಾರೆ.
ನಿನ್ನೆ ರಾತ್ರಿ ಸದನದಲ್ಲೇ ಮಲಗಿ ಅಹೋರಾತ್ರಿ ಧರಣಿ ನಡೆಸಿದ್ದ ಬಿಜೆಪಿ ಸದಸ್ಯರು, ಇಂದು ಬೆಳಿಗ್ಗೆ ಕಲಾಪ ಆರಂಭವಾಗುತ್ತಿದ್ದಂತೆಯೇ ಮತ್ತೆ ಬಾವಿಗಿಳಿದು ಸರ್ಕಾರದ ವಿರುದ್ಧ ಘೋಷಣೆ ಕೂಗಲು ಆರಂಭಿಸಿದರು.
ಈ ವೇಳೆ ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯದ ಮೇಲೆ ಮಾತನಾಡಲು ಎದ್ದು ನಿಂತ ಅರಸೀಕೆರೆ ಶಾಸಕ ಕೆ.ಎಂ. ಶಿವಲಿಂಗೇಗೌಡ ಅವರು, ಬಿಜೆಪಿಯವರ ಗಲಾಟೆಯಿಂದ ತೀವ್ರ ಅಸಮಾಧಾನಗೊಂಡು ಆಕ್ರೋಶ ವ್ಯಕ್ತಪಡಿಸಿದರು.
ಶಿವಲಿಂಗೇಗೌಡರ ಆಕ್ರೋಶ
ಬಿಜೆಪಿ ನಾಯಕರ ವರ್ತನೆಯನ್ನು ಕಂಡು ಕೆಂಡಕಾರಿದ ಶಿವಲಿಂಗೇಗೌಡರು, “ನಿಮಗೆ ಏನಾದರೂ ಮಾನ ಮರ್ಯಾದೆ ಇದೆಯಾ? ಇದು ಅಸೆಂಬ್ಲಿನಾ ಅಥವಾ ಡ್ಯಾನ್ಸ್ ಮಾಡೋಕೆ ಬಂದಿದ್ದೀರಾ?” ಎಂದು ಏಕವಚನದಲ್ಲೇ ತರಾಟೆಗೆ ತೆಗೆದುಕೊಂಡರು. ಅವರ ಆಕ್ರೋಶ ಅಷ್ಟಕ್ಕೇ ನಿಲ್ಲಲಿಲ್ಲ. “ನಾವು ಕೂಡ ಹಿಂದೆ ವಿರೋಧ ಪಕ್ಷದಲ್ಲಿದ್ದಾಗ ಧರಣಿ ಮಾಡಿದ್ದೇವೆ. ಆದರೆ, ಈ ರೀತಿಯಾಗಿ ಅಸಭ್ಯವಾಗಿ ವರ್ತಿಸಿಲ್ಲ. ಸದನದ ಗೌರವ ಹಾಳುಮಾಡುವ ನಿಮ್ಮಂತಹ ಕೆಟ್ಟ ಜನರನ್ನ ನಾನು ನನ್ನ ರಾಜಕೀಯ ಜೀವನದಲ್ಲಿ ಎಲ್ಲಿಯೂ ನೋಡಿಲ್ಲ,” ಎಂದು ಕಿಡಿಕಾರಿದರು.
ಇದನ್ನೂ ಓದಿ | ಅಬಕಾರಿ ಇಲಾಖೆಯಲ್ಲಿ 6,000 ಕೋಟಿ ರೂ. ಹಗರಣ – ಬಿಜೆಪಿ ಗಂಭೀರ ಆರೋಪ
ಆರೆಸ್ಸೆಸ್ ಪ್ರಸ್ತಾಪ ಮತ್ತು ಗದ್ದಲ:
ವಾಗ್ವಾದದ ಭರದಲ್ಲಿ ಶಿವಲಿಂಗೇಗೌಡರು ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ಹೆಸರನ್ನು ಪ್ರಸ್ತಾಪಿಸಿದ್ದು ಬೆಂಕಿಗೆ ತುಪ್ಪ ಸುರಿದಂತಾಯಿತು. ಬಿಜೆಪಿ ಸದಸ್ಯರನ್ನುದ್ದೇಶಿಸಿ, “ಲೇ ಆರೆಸ್ಸೆಸ್ಸು.. ಆರೆಸ್ಸೆಸ್ಸು.. ಥೂ ನಿಮ್ಮ ಯೋಗ್ಯತೆಗೆ ಬೆಂಕಿ ಹಾಕಾ..” ಎಂದು ಅತ್ಯಂತ ಕಠಿಣ ಪದಗಳಲ್ಲಿ ನಿಂದಿಸಿದರು. ಗೌಡರ ಈ ಮಾತುಗಳು ಬಿಜೆಪಿ ಸದಸ್ಯರನ್ನು ಮತ್ತಷ್ಟು ರೊಚ್ಚಿಗೇಳುವಂತೆ ಮಾಡಿತು. ಇದರಿಂದ ಸದನದಲ್ಲಿ ಆಡಳಿತ ಮತ್ತು ವಿರೋಧ ಪಕ್ಷದ ಸದಸ್ಯರ ನಡುವೆ ತೀವ್ರ ಮಾತಿನ ಚಕಮಕಿ ನಡೆಯಿತು.
