ಬೆಂಗಳೂರು: ‘ತಾಜ್ ಮಹಲ್’ ಅಂತಹ ಅಪ್ಪಟ ಪ್ರೇಮಕಥೆಯಿಂದ ಹಿಡಿದು ‘ಕಬ್ಜ’ ಅಂತಹ ಅದ್ದೂರಿ ಪ್ಯಾನ್-ಇಂಡಿಯಾ ಸಿನಿಮಾಗಳ ಮೂಲಕ ಸದ್ದು ಮಾಡಿರುವ ಖ್ಯಾತ ನಿರ್ದೇಶಕ ಆರ್. ಚಂದ್ರು ಅವರಿಗೆ ಈಗ ‘ಡಾಕ್ಟರ್’ ಗೌರವ ಲಭಿಸಿದೆ.
ಮಣಿಪುರ ಅಂತರಾಷ್ಟ್ರೀಯ ವಿಶ್ವವಿದ್ಯಾಲಯವು (Manipur International University – MIU) ಸಿನಿಮಾ, ಕಲೆ ಮತ್ತು ಸಮಾಜ ಸೇವೆಯಲ್ಲಿ ಚಂದ್ರು ಅವರು ನೀಡಿರುವ ಅಪ್ರತಿಮ ಕೊಡುಗೆಯನ್ನು ಪರಿಗಣಿಸಿ ಗೌರವ ಡಾಕ್ಟರೇಟ್ ನೀಡುವುದಾಗಿ ಅಧಿಕೃತವಾಗಿ ಪ್ರಕಟಿಸಿದೆ.
ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಆದ ವಿಶಿಷ್ಟ ಶೈಲಿಯ ಮೇಕಿಂಗ್ ಮೂಲಕ ಗುರುತಿಸಿಕೊಂಡಿರುವ ಆರ್. ಚಂದ್ರು, ಕೇವಲ ಒಬ್ಬ ತಾಂತ್ರಿಕ ನಿರ್ದೇಶಕರಷ್ಟೇ ಅಲ್ಲದೆ, ಚಿತ್ರರಂಗದ ಬೆಳವಣಿಗೆಗೆ ಶ್ರಮಿಸುತ್ತಿರುವ ಕ್ರಿಯಾಶೀಲ ವ್ಯಕ್ತಿತ್ವ. ಇತ್ತೀಚಿನ ವರ್ಷಗಳಲ್ಲಿ ಅವರು ಕನ್ನಡ ಸಿನಿಮಾಗಳನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯಲು ನಡೆಸುತ್ತಿರುವ ಪ್ರಯತ್ನಗಳು ಗಮನಾರ್ಹವಾಗಿವೆ. ಚಂದ್ರು ಅವರ ಈ ಸಾಂಸ್ಕೃತಿಕ ಶ್ರೇಷ್ಠತೆ ಮತ್ತು ಅವರ ಸದ್ದಿಲ್ಲದ ಸಮಾಜ ಸೇವೆಯನ್ನು ಗುರುತಿಸಿ ಈ ಉನ್ನತ ಗೌರವವನ್ನು ನೀಡಲಾಗುತ್ತಿದೆ ಎಂದು ವಿಶ್ವವಿದ್ಯಾಲಯ ತಿಳಿಸಿದೆ.
ಇದನ್ನೂ ಓದಿ | ಟಾಕ್ಸಿಕ್ ಅಬ್ಬರ: ಬಿಡುಗಡೆಗೂ ಮುನ್ನವೇ ದಾಖಲೆ; ತೆಲುಗು ರಾಜ್ಯಗಳಲ್ಲಿ ಯಶ್ ಚಿತ್ರಕ್ಕೆ ಭಾರಿ ಬೇಡಿಕೆ!
ತಮ್ಮ ನೆಚ್ಚಿನ ನಿರ್ದೇಶಕರಿಗೆ ಈ ಗೌರವ ಲಭಿಸಿರುವುದು ಕಂಡು ಅಭಿಮಾನಿಗಳು ಮತ್ತು ಆಪ್ತರು ಸಾಮಾಜಿಕ ಜಾಲತಾಣಗಳಲ್ಲಿ ಶುಭಾಶಯಗಳ ಸುರಿಮಳೆಗರೆಯುತ್ತಿದ್ದಾರೆ. ಚಂದ್ರು ಅವರ ಕಚೇರಿ ಮತ್ತು ಮನೆಯ ಮುಂದೆ ಸಂಭ್ರಮದ ವಾತಾವರಣ ಮನೆಮಾಡಿದೆ. ಈ ಹಿಂದೆ ಆರ್. ಚಂದ್ರು ಅವರು ‘ಚಾರ್ಮಿನಾರ್’, ‘ಮೈಲಾರಿ’ ಅಂತಹ ಹಿಟ್ ಚಿತ್ರಗಳನ್ನು ನೀಡಿದ್ದು, ಪ್ರಸ್ತುತ ಹಲವು ದೊಡ್ಡ ಪ್ರಾಜೆಕ್ಟ್ಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಪ್ರಶಸ್ತಿಯು ಅವರ ಮುಂದಿನ ಸಿನೆಮಾ ಪಯಣಕ್ಕೆ ಮತ್ತಷ್ಟು ಸ್ಫೂರ್ತಿ ನೀಡಲಿದೆ ಎಂಬುದು ಆಪ್ತರ ಮಾತು.
