ಮಯನ್ಮಾರ್ನ ಚೀನಿ ಸೈಬರ್ ವಂಚನಾ ಜಾಲದಲ್ಲಿ ಸಿಲುಕಿದ್ದ ಕರ್ನಾಟಕದ ಇಬ್ಬರು ಯುವಕರನ್ನು ರಕ್ಷಿಸಿ ಸುರಕ್ಷಿತವಾಗಿ ಭಾರತಕ್ಕೆ ಕರೆತಂದ ಅಧಿಕಾರಿಗಳು
ಬೆಂಗಳೂರು, ಜು, 22: ಮ್ಯಾನ್ಮಾರ್ನಲ್ಲಿ ಚೀನಿ ಅಪರಾಧ ಜಾಲಗಳು ನಡೆಸುತ್ತಿದ್ದ ಸೈಬರ್ ವಂಚನಾ ಕೇಂದ್ರದಲ್ಲಿ ಸಿಲುಕಿಕೊಂಡಿದ್ದ ಕರ್ನಾಟಕದ ಇಬ್ಬರು ಯುವಕರನ್ನು ಯಶಸ್ವಿ ಕಾರ್ಯಾಚರಣೆಯ ಮೂಲಕ ಸುರಕ್ಷಿತವಾಗಿ ಭಾರತಕ್ಕೆ ಕರೆತರಲಾಗಿದೆ. ರಕ್ಷಣೆಯಾದ ಇಬ್ಬರೂ ಸೋಮವಾರ ತಡರಾತ್ರಿ ತಮ್ಮ ಕುಟುಂಬಗಳನ್ನು ಸೇರಿದ್ದಾರೆ.
ಈ ಕಾರ್ಯಾಚರಣೆಯನ್ನು ಕರ್ನಾಟಕ ಸೈಬರ್ ಕಮಾಂಡ್, ಭಾರತೀಯ ಸೈಬರ್ ಅಪರಾಧ ಸಮನ್ವಯ ಕೇಂದ್ರ (I4C), ಜಾರಿ ನಿರ್ದೇಶನಾಲಯ (ED) ಹಾಗೂ ಮ್ಯಾನ್ಮಾರ್ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಸಮನ್ವಯದಲ್ಲಿ ನಡೆಸಿವೆ. ಜಾರಿ ನಿರ್ದೇಶನಾಲಯದಿಂದ ದೊರೆತ ಮಾಹಿತಿ ಆಧರಿಸಿ ಕಾರ್ಯಾಚರಣೆ ಆರಂಭವಾಗಿದ್ದು, ವಿವಿಧ ಇಲಾಖೆಗಳ ನಿರಂತರ ಸಹಕಾರದಿಂದ ಅಲ್ಪಾವಧಿಯಲ್ಲೇ ರಕ್ಷಣಾ ಕಾರ್ಯ ಯಶಸ್ವಿಯಾಗಿದೆ.
ಅಧಿಕಾರಿಗಳ ಪ್ರಕಾರ, ಇಂತಹ ಕಾರ್ಯಾಚರಣೆಗಳು ದೇಶದ ನಾಗರಿಕರನ್ನು ವಿದೇಶಗಳಲ್ಲಿ ರಕ್ಷಿಸುವಲ್ಲಿ ವಿವಿಧ ಸಂಸ್ಥೆಗಳ ನಡುವೆ ತ್ವರಿತ ಮಾಹಿತಿ ವಿನಿಮಯ ಮತ್ತು ರಾಜತಾಂತ್ರಿಕ ಸಹಕಾರದ ಮಹತ್ವವನ್ನು ಮತ್ತೊಮ್ಮೆ ಸಾಬೀತುಪಡಿಸಿವೆ.
ವಂಚನಾ ಜಾಲ ಹೇಗೆ ಕಾರ್ಯನಿರ್ವಹಿಸುತ್ತದೆ?
ಮ್ಯಾನ್ಮಾರ್ನ ಕಯಿನ್ ರಾಜ್ಯದಲ್ಲಿರುವ ಈ ವಂಚನಾ ಕೇಂದ್ರವು ಚೀನಿ ಅಪರಾಧ ಸಂಘಟನೆಗಳ ನಿಯಂತ್ರಣದಲ್ಲಿರುವ ಹಲವು ‘ಸ್ಕ್ಯಾಮ್ ಕಾಂಪೌಂಡ್’ಗಳಲ್ಲೊಂದು. ಉದ್ಯೋಗದ ಭರವಸೆ ನೀಡಿ ವಿದೇಶಕ್ಕೆ ಕರೆಸಿಕೊಳ್ಳುವ ಯುವಕರನ್ನು ಬಳಿಕ ಬಲವಂತವಾಗಿ ಆನ್ಲೈನ್ ಪ್ರೇಮ ವಂಚನೆ, ನಕಲಿ ಹೂಡಿಕೆ ಯೋಜನೆಗಳು ಹಾಗೂ ಇತರ ಸೈಬರ್ ಅಪರಾಧಗಳಲ್ಲಿ ತೊಡಗಿಸಲಾಗುತ್ತದೆ. ಈ ಮಾದರಿಯ ವಂಚನೆಯನ್ನು ಜಾಗತಿಕ ಮಟ್ಟದಲ್ಲಿ ‘ಪಿಗ್-ಬಚ್ಚರಿಂಗ್ ಸ್ಕ್ಯಾಮ್’ ಎಂದು ಕರೆಯಲಾಗುತ್ತದೆ.
ಯುವಕರಿಗೆ ಸೈಬರ್ ಕಮಾಂಡ್ನ ಎಚ್ಚರಿಕೆ
ಈ ಘಟನೆಯ ನಂತರ ವಿದೇಶಿ ಉದ್ಯೋಗದ ಆಮಿಷಗಳಿಗೆ ಮೋಸಹೋಗದಂತೆ ಕರ್ನಾಟಕ ಸೈಬರ್ ಕಮಾಂಡ್ ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದೆ. ವಿಶೇಷವಾಗಿ ಥಾಯ್ಲೆಂಡ್, ಮ್ಯಾನ್ಮಾರ್, ಲಾವೋಸ್ ಮತ್ತು ಕಂಬೋಡಿಯಾದಲ್ಲಿ ಹೆಚ್ಚಿನ ಸಂಬಳದ ಹೆಸರಿನಲ್ಲಿ ನೀಡುವ ಐಟಿ, ಗ್ರಾಹಕ ಸೇವೆ, ಡೇಟಾ ಎಂಟ್ರಿ ಹಾಗೂ ಆನ್ಲೈನ್ ಮಾರ್ಕೆಟಿಂಗ್ ಉದ್ಯೋಗಗಳನ್ನು ಸ್ವೀಕರಿಸುವ ಮೊದಲು ಸಂಪೂರ್ಣ ಪರಿಶೀಲನೆ ನಡೆಸುವಂತೆ ಸಲಹೆ ನೀಡಿದೆ.
ಈ ಸೂಚನೆಗಳು ಕಂಡುಬಂದರೆ ಎಚ್ಚರವಾಗಿರಿ
- ವಾಟ್ಸಾಪ್, ಟೆಲಿಗ್ರಾಂ ಅಥವಾ ಸಾಮಾಜಿಕ ಜಾಲತಾಣಗಳ ಮೂಲಕ ಅನಿರೀಕ್ಷಿತ ಉದ್ಯೋಗದ ಸಂದೇಶಗಳು ಬರುವುದು.
- ತಕ್ಷಣವೇ ವಿದೇಶಕ್ಕೆ ಪ್ರಯಾಣಿಸುವಂತೆ ಒತ್ತಡ ಹೇರುವುದು.
- ಪ್ರಯಾಣದ ಟಿಕೆಟ್ ಸೇರಿದಂತೆ ಎಲ್ಲಾ ವೆಚ್ಚಗಳನ್ನು ಕಂಪನಿಯೇ ಭರಿಸುವುದಾಗಿ ಹೇಳುವುದು.
- ಕಂಪನಿಯ ವಿಶ್ವಾಸಾರ್ಹತೆ ಬಗ್ಗೆ ಯಾವುದೇ ದಾಖಲೆಗಳಿಲ್ಲದಿದ್ದರೂ ಅಧಿಕ ಸಂಬಳ ಮತ್ತು ಉಚಿತ ವಸತಿ ಭರವಸೆ ನೀಡುವುದು.
- ವಿದೇಶ ತಲುಪಿದ ನಂತರ ಪಾಸ್ಪೋರ್ಟ್ ವಶಪಡಿಸಿಕೊಳ್ಳುವುದು ಅಥವಾ ಅಕ್ರಮವಾಗಿ ಗಡಿ ದಾಟುವಂತೆ ಸೂಚಿಸುವುದು.
ವಿದೇಶಿ ಉದ್ಯೋಗ ಸ್ವೀಕರಿಸುವ ಮೊದಲು ಗಮನಿಸಬೇಕಾದ ಅಂಶಗಳು
ಉದ್ಯೋಗ ನೀಡುತ್ತಿರುವ ಸಂಸ್ಥೆಯ ವಿಶ್ವಾಸಾರ್ಹತೆಯನ್ನು ಅಧಿಕೃತ ಮೂಲಗಳಿಂದ ಪರಿಶೀಲಿಸಬೇಕು. ಪ್ರಯಾಣದ ವಿವರಗಳನ್ನು ಕುಟುಂಬ ಸದಸ್ಯರು ಹಾಗೂ ಸ್ಥಳೀಯ ಪೊಲೀಸರಿಗೆ ತಿಳಿಸಬೇಕು. ವಿದೇಶ ತಲುಪಿದ ಕೂಡಲೇ ಭಾರತೀಯ ರಾಯಭಾರ ಕಚೇರಿ ಅಥವಾ ದೂತಾವಾಸದಲ್ಲಿ ನೋಂದಣಿ ಮಾಡಿಸಿಕೊಳ್ಳುವುದು ಸುರಕ್ಷತೆಯ ದೃಷ್ಟಿಯಿಂದ ಅಗತ್ಯವಾಗಿದೆ.
ಮಾನವ ಕಳ್ಳಸಾಗಣೆ, ಅಕ್ರಮ ಬಂಧನ ಅಥವಾ ಯಾವುದೇ ರೀತಿಯ ಬೆದರಿಕೆ ಎದುರಾದರೆ ವಿಳಂಬ ಮಾಡದೆ ಸಮೀಪದ ಸೈಬರ್ ಅಪರಾಧ ಪೊಲೀಸ್ ಠಾಣೆ, ಕರ್ನಾಟಕ ಸೈಬರ್ ಕಮಾಂಡ್, ಭಾರತೀಯ ರಾಯಭಾರ ಕಚೇರಿ, I4C ಸಹಾಯವಾಣಿ 1930 ಅಥವಾ ರಾಷ್ಟ್ರೀಯ ಸೈಬರ್ ಅಪರಾಧ ವರದಿ ಪೋರ್ಟಲ್ ಮೂಲಕ ದೂರು ದಾಖಲಿಸುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ.

